ಬೆಂಗಳೂರು: ಮನೆಯಿಂದ ಕೆಲಸ ಮಾಡುವ ಅವಕಾಶಗಳ ಆಮಿಷವೊಡ್ಡಿ ಜನರನ್ನು ವಂಚಿಸುತ್ತಿದ್ದ ಹನ್ನೆರಡು ಜನರನ್ನು ಬಂಧಿಸಲಾಗಿದೆ. ಆರೋಪಿಗಳು ಬಿಹಾರ ಮತ್ತು ಉತ್ತರ ಪ್ರದೇಶದಿಂದ ಬಂದ ಗ್ಯಾಂಗ್ ನ ಭಾಗವಾಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಜನವರಿಯಲ್ಲಿ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಗೃಹಿಣಿಯೊಬ್ಬರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಬಳಿಕ ಈ ಆರೋಪಿಗಳನ್ನು ಬಂಧಿಸಲಾಗಿದೆ. ಮನೆಯಿಂದ ಕೆಲಸ ಮಾಡುವ ಅವಕಾಶದ ನೆಪ ಹೇಳಿ ಐದು ಲಕ್ಷ ರೂಪಾಯಿ ವಂಚಿಸಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ.
ಪೊಲೀಸರ ಪ್ರಕಾರ, ಸಂತ್ರಸ್ತೆ ತನ್ನ ದೂರಿನಲ್ಲಿ, ಮನೆಯಿಂದ ಕೆಲಸ ಮಾಡುವ ಅವಕಾಶದ ಆಮಿಷ ಒಡ್ಡಿ ತನ್ನ ’ಕಡಿಮೆ ಕ್ರೆಡಿಟ್ ಸ್ಕೋರ್ ಸರಿಪಡಿಸಲು’ ಹಣವನ್ನು ವರ್ಗಾಯಿಸಲು ಕೇಳಲಾಗಿದೆ. ಅವರನ್ನು ನಂಬಿ, ಹಣವನ್ನು ಹಲವು ಬಾರಿ ಖಾತೆಯೊಂದಕ್ಕೆ ವರ್ಗಾಯಿಸಿರುವುದಾಗಿ ಆರೋಪಿಸಿದ್ದಾರೆ.
ತನಿಖೆಯ ಸಮಯದಲ್ಲಿ, ಹಣವನ್ನು ವರ್ಗಾಯಿಸಿದ ಬ್ಯಾಂಕ್ ಖಾತೆ ಮಹಾರಾಷ್ಟ್ರದ ನವಿ ಮುಂಬೈನ 27 ವರ್ಷದ ಸೋನು ಎಂಬುವವರದಾಗಿದ್ದು, ಪೊಲೀಸರು ನೋಟಿಸ್ ನೀಡಿದ್ದಾರೆ. ತನಿಖೆಯ ನಂತರ, ಪ್ರಕರಣದ ಇಬ್ಬರು ಪ್ರಮುಖ ಶಂಕಿತರು ಎಂದು ಗುರುತಿಸಲಾದ ಉತ್ತರ ಪ್ರದೇಶದ ಸೋನು ಮತ್ತು ಹರ್ಷವಧನ್ ಓಜಾ (25) ಎಂಬುವವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹನ್ನೆರಡು ಜನ ವಂಚಕರ ಬಂಧನ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು