ಬೆಂಗಳೂರು: ದೇಶದಾದ್ಯಂತ ಮತ್ತೆ ಮಹಾಮಾರಿ ಕೊರೊನಾ ಹಾವಳಿ ಜೋರಾಗಿದೆ. ರಾಜ್ಯದಲ್ಲೂ ಸಹ ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದು, ಒಂದೇ ದಿನ 33 ಪ್ರಕರಣ ದೃಢಪಟ್ಟಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 80ಕ್ಕೇರಿದೆ. ಈ ಸಲುವಾಗಿ ಸಿದ್ದರಾಮಯ್ಯ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ವಿಶೇಷ ಸಭೆ ನಡೆಸಿ ಕೆಲ ಸೂಚನೆ ನೀಡಿದ್ದಾರೆ.
ಕೋವಿಡ್ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮಯ್ಯ ಮೊನ್ನೆ ಆರೋಗ್ಯ ಇಲಾಖೆ, ವೈದ್ಯಕೀಯ ಇಲಾಖೆ ಹಾಗೂ ಟಾಸ್ಕ್ ಫೋರ್ಸ್ ಜೊತೆ ಮೀಟಿಂಗ್ ಮಾಡಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದೇನೆ. ಆಕ್ಸಿಜನ್ ಗೆ ತೊಂದರೆಯಾಗಬಾರದು, ವೆಂಟಿಲೇಟರ್ ಗೆ ತೊಂದರೆ ಇರಬಾರದು, ಕಿಟ್ ಗಳ ತೊಂದರೆಯಾಗಬಾರದು, ವಾರ್ಡ್ಗಳ ತೊಂದರೆಯಾಗಬಾರದು ಎಂದು ಸೂಚಿಸಿದ್ದೇನೆ ಎಂದರು.
ಅಲ್ಲದೇ ಇದು ಅಂತಹ ಗಂಭೀರ ತಳಿ ಅಲ್ಲ, ಯಾರೂ ಸಹ ಗಾಬರಿಯಾಗುವುದು ಬೇಡ. ಶೀತ, ಕೆಮ್ಮು, ಜ್ವರ ಇರುವ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ ಎಂದು ಸಿದ್ದರಾಮಯ್ಯ ಪೋಷಕರಲ್ಲಿ ಮನವಿ ಮಾಡಿಕೊಂಡರು. ಖಾಯಿಲೆಗಳಿಗೆ ಒಳಗಾಗಿರುವ ವದ್ಧರು ಮಾಸ್ಕ್ ಧರಿಸಿ ಎಂದು ಹೇಳಿದ್ದೇನೆ, ಜೊತೆಗೆ ವಾಕ್ಸಿನ್ ಸಿದ್ಧಪಡಿಸಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು. ಅಲ್ಲದೇ ಮಾಸ್ಕ್ ಕಡ್ಡಾಯ ಮಾಡಿಲ್ಲ, ಯಾರಿಗೆ ಆರೋಗ್ಯ ತೊಂದರೆ ಇದ್ದವರು ಮಾತ್ರ ಧರಿಸಿದರೆ ಸಾಕು ಎಂದು ಸಿದ್ದರಾಮಯ್ಯ ತಿಳಿಸಿದರು.