ಕೊರಟಗೆರೆ: ಜಮೀನು ಉಳುಮೆ ಮಾಡುತ್ತಿದ್ದ ಯುವಕ ಮಧ್ಯಹ್ನ ಊಟಕ್ಕೆಂದು ಕೃಷಿ ಹೊಂಡದಲ್ಲಿ ಕೈ ತೊಳೆಯಲು ಹೋಗಿ ಆಯಾ ತಪ್ಪಿ ನೀರಿಗೆ ಬಿದ್ದಿದ್ದು ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೊರಟಗೆರೆ ತಾಲ್ಲೂಕಿನ ಕಸಬಾ ಹೋಬಳಿ ಚೀಲಗಾನಹಳ್ಳಿ ಗ್ರಾಮದ ಜಮೀನು ಒಂದರಲ್ಲಿ ಟ್ರಾಕ್ಟರ್ ಮೂಲಕ ಉಳುಮೆ ಮಾಡುತ್ತಿದ್ದ ಯುವಕ ಮಧ್ಯಹ್ನ ಊಟಕ್ಕೆಂದು ಉಳುಮೆ ನಿಲ್ಲಿಸಿ ಕೃಷಿ ಹೊಂಡದಲ್ಲಿ ಕೈ ತೊಳೆಯಲು ಹೋಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಮೃತ ಯುವಕ ಚಂದನ್ ಕುಮಾರ್ (21) ಎತ್ತಗಾನಹಳ್ಳಿ ಗ್ರಾಮದವನು ಎಂದು ಸ್ಥಳೀಯರು ಗುರುತಿಸಿದ್ದು, ಅಗ್ನಿ ಶಾಮಕ ದಳ ಸಿಬ್ಬಂದಿಯ ಕಾರ್ಯಾಚರಣೆ ಮೂಲಕ ಮೃತ ದೇಹ ಹೊರ ತೆಗೆಯಲಾಯಿತು.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಮಂಜುನಾಥ್ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದು ಅಸಹಜ ಸಾವಿಗೆ ಮಧುಗಿರಿ ಉಪ ವಿಭಾಗಧಿಕಾರಿಗಳ ಜೊತೆ ಚರ್ಚಿಸಿ ಸರ್ಕಾರದಿಂದ ಸಿಗುವ ಪರಿಹಾರವನ್ನು ಮೃತ ಯುವಕ ಕುಟುಂಬಕ್ಕೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಪೊಲೀಸ್ ಇಲಾಖೆಯ ಸಿಪಿಐ ಅನಿಲ್ ಮತ್ತು ಪಿಎಸ್ ಐ ಬಸವರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಘಟನೆಗೆ ಕಾರಣದ ಬಗ್ಗೆ ಮಾಹಿತಿ ಸಂಗ್ರಹಣೆಗೆ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ ಎಂಬುದು ತಿಳಿದು ಬಂದಿದೆ.
ಕೃಷಿ ಹೊಂಡಕ್ಕೆ ಕಾಲು ಜಾರಿ ಬಿದ್ದು ಯುವಕ ಸಾವು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು