ಬೆಂಗಳೂರು: ಆರ್ ಸಿಬಿ ತಂಡದ ವಿಜಯೋತ್ಸವದ ವೇಳೆ ಉಂಟಾದ ಕಾಲ್ತುಳಿತದ ಘಟನೆಯಲ್ಲಿ 11 ಜನರ ಸಾವಿನ ದುರಂತ ಇಡೀ ಸರ್ಕಾರಕ್ಕೆ ಮುಜುಗರವುಂಟು ಮಾಡಿದೆ. ಇನ್ನೊಂದೆಡೆ ಪ್ರತಿಪಕ್ಷಗಳು ಮಾತ್ರವಲ್ಲ ಹೈಕೋರ್ಟ್ ಸಹ ಘಟನೆ ಟೀಕಿಸಿ ರಾಜ್ಯ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದೆ.
ರಾಜ್ಯಕ್ಕೆ ಈ ಘಟನೆ ಕಪ್ಪುಚುಕ್ಕೆಯಾಗಿರುವ ಬೆನ್ನಲ್ಲೇ ಇದೀಗ ಚಿನ್ನಸ್ವಾಮಿ ಸ್ಟೇಡಿಯಂ ಸ್ಥಳಾಂತರದ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಮೊನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಅವರು, ಕಡಿಮೆ ಸಾರ್ಮಥ್ಯವಿರುವ ಕ್ರಿಕೆಟ್ ಕ್ರೀಡಾಂಗಣವನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಸರ್ಕಾರ ಗಮನಹರಿಸಿದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ವಿಷಯ ಸರ್ಕಾರ ಪರಿಶೀಲಿಸಲಿದೆ. ಯಾವ ಸರ್ಕಾರದ ಅವಧಿಯಲ್ಲಿಯೂ ಇಂತಹ ಅಹಿತಕರ ಘಟನೆ ನಡೆಯಬಾರದು. ವೈಯಕ್ತಿಕವಾಗಿ ಈ ಘಟನೆ ಸರ್ಕಾರಕ್ಕೆ ನೋವು ತಂದಿದೆ ಎನ್ನುತಲೇ ಸ್ಥಳಾಂತರದ ಸುಳಿವು ನೀಡಿದ್ದರು.ಇದೀಗ ಮಹತ್ವದ ಬೆಳವಣಿಗೆ ಎಂಬಂತೆ, ಚಿನ್ನಸ್ವಾಮಿ ಸ್ಟೇಡಿಯಂ ಸ್ಥಳಾಂತರಿಸುವಂತೆ ಕೋರಿ ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲು ನಿರ್ಧರಿಸಿದೆ. ಕ್ರೀಡಾಂಗಣವಿರುವ ಜಾಗ ಭಾರತೀಯ ಸೇನೆಗೆ ಸೇರಿದ್ದು, ಈ ಸ್ಥಳ ವಶಕ್ಕೆ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿಸಿದ್ದೇವೆ ಎಂದು ಸಂಘಟನೆ ತಿಳಿಸಿದೆ. ಈ ಕುರಿತು ಮಾತನಾಡಿರುವ ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಉಮೇಶ್ ಶೆಟ್ಟಿ, ಚಿನ್ನಸ್ವಾಮಿ ಸ್ಟೇಡಿಯಂ ಸೇನೆಗೆ ಸೇರಿದ ಜಾಗ. 18.50 ಎಕರೆ ಈ ಜಾಗವಾಗಿದೆ. ಇದು ಆರ್ಮಿಗೆ ಸೇರಿದ್ದು, ನಗರದಿಂದ ಇದನ್ನು ಸ್ಥಳಾಂತರಿಸಲಿ. ಸ್ಟೇಡಿಯಂ ನಿಂದಲೇ ಟ್ರಾಫಿಕ್ ಸಮಸ್ಯೆಯೂ ಆಗುತ್ತಿದೆ. ಹೀಗಾಗಿ ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವರಿಗೆ ಪತ್ರ ಬರೆದು ಈ ಕುರಿತು ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಸ್ಥಳಾಂತರವಾಗುತ್ತಾ ಚಿನ್ನಸ್ವಾಮಿ ಸ್ಟೇಡಿಯಂ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು