ದಾವಣಗೆರೆ: ಮನೆ ಬೀಗ ಮುರಿದು ಕಳ್ಳತನ ಮಾಡಿದ ಪ್ರಕರಣ ಭೇದಿಸಿದ ಪೊಲೀಸರು ಆರೋಪಿ ಬಂಧಿಸಿ 33.24 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರದುರ್ಗ ನಗರದ ಗೋಳೆರಹಟ್ಟಿ ತಾಜಪೀರ್ ಬಡಾವಣೆಯ ನಿವಾಸಿ ಸೈಯ್ಯದ್ ಅಕ್ಬರ್ (58) ಬಂಧಿತ ಆರೋಪಿ. ವಿದ್ಯಾನಗರ 1ನೇ ಮುಖ್ಯ ರಸ್ತೆ 8ನೇ ಕ್ರಾಸ್ ನ ಶಂಕರಯ್ಯ ಎಂಬುವರು ಮೇ 19ರಂದು ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದರು. ಜೂ.6ರಂದು ಬೆಂಗಳೂರಿನಿಂದ ಮನೆಗೆ ವಾಪಸ್ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದ್ದು, ಮನೆಯ ಬಾಗಿಲು ಇಂಟರ್ಲಾಕ್ ಬೀಗ ಮುರಿದಿದ್ದು ಗಾಡ್ರೇಜ್ ಬೀರುವಿನಲ್ಲಿ ಇಟ್ಟಿದ್ದ ಚಿನ್ನಾಭರಣ, ನಗದು ಹಣ ಕಳವು ಮಾಡಲಾಗಿತ್ತು. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಶಂಕರಯ್ಯ ಕಳ್ಳತನ ನಡೆದ ಬಗ್ಗೆ ದೂರು ನೀಡಿದ್ದರು.
ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ಜಿ.ಮಂಜುನಾಥ್, ನಗರ ಡಿವೈಎಸ್ಪಿ ಶರಣ ಬಸವೇಶ್ವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಠಾಣೆ ನಿರೀಕ್ಷಕಿ ವೈ.ಎಸ್.ಶಿಲ್ಪಾ, ಪಿಎಸ್ ಐ ಜಿ.ಎನ್.ವಿಶ್ವನಾಥ್ ಹಾಗೂ ಸಿಬ್ಬಂದಿ ಆರೋಪಿ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತನಿಂದ 33.24 ಲಕ್ಷ ರೂ. ಮೌಲ್ಯದ 332.740 ಗ್ರಾಂ ತೂಕದ ಚಿನ್ನಾಭರಣ, 544 ಗ್ರಾಂ ತೂಕದ ಬೆಳ್ಳಿ ಸಾಮಾನುಗಳು, 1,32,000 ನಗದು ಹಾಗೂ ಕೃತ್ಯಕ್ಕೆ ಬಳಸಿದ ಕಾರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಹಿನ್ನೆಲೆ: ಶಿವಮೊಗ್ಗ ವಿನೋಬನಗರ ಠಾಣೆಯಲ್ಲಿ 2013ರಲ್ಲಿ ಮನೆಕಳ್ಳತನ ಪ್ರಕರಣ, ಚಿತ್ರದುರ್ಗ ಟೌನ್ ಪೊಲೀಸ್ ಠಾಣೆಯಲ್ಲಿ 2020ರಲ್ಲಿ ಮನೆಕಳ್ಳತನ ಪ್ರಕರಣ ದಾಖಲಾಗಿವೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಅಭಿನಂದನೆ ಸಲ್ಲಿಸಿದ್ದಾರೆ.
ಮನೆಗಳ್ಳತನ ಪ್ರಕರಣ ಭೇದಿಸಿದ ಪೊಲೀಸರು: 33.24 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು