ಬೆಂಗಳೂರು: ಬೆಂಗಳೂರಲ್ಲಿ ಹೋಟೆಲ್ ರೂಮ್ ನಲ್ಲಿ ಖೋಟಾ ನೋಟುಗಳನ್ನು ಪ್ರಿಂಟ್ ಮಾಡಿದ್ದ ಆರೋಪಿಯನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕ್ರಿಷ್ ಮಾಲಿ (23) ಎಂದು ತಿಳಿದುಬಂದಿದೆ. ಟಸ್ಕರ್ ಟೌನ್ ನಲ್ಲಿರುವ ಹೋಟೆಲ್ನಲ್ಲಿ ಜೂನ್ 1ರಂದು ರೂಮ್ ಬುಕ್ ಮಾಡಿದ್ದ ಆರೋಪಿ, ಖೋಟಾ ನೋಟುಗಳನ್ನು ಪ್ರಿಂಟ್ ಮಾಡಿದ್ದ.ಅಲ್ಲದೇ ಜೂನ್ 7ರಂದು ಹೋಟೆಲ್ನಿಂದ ಚೆಕ್ ಔಟ್ ಆಗುವಾಗ ನಕಲಿ ನೋಟುಗಳ ಮೂಲಕ ಬಿಲ್ ಪಾವತಿಸಿದ್ದ.ಬ್ಯಾಗ್ ನಲ್ಲಿ ಪ್ರಿಂಟರ್, ಸ್ಕ್ಯಾನರ್ ಗಳನ್ನು ತಂದಿದ್ದ ಆರೋಪಿ ಹೋಟೆಲ್ನಲ್ಲಿ ಕುಳಿತೇ 500 ರೂ. ಮುಖಬೆಲೆಯ ನಕಲಿ ನೋಟುಗಳನ್ನು ಕಲರ್ ಜೆರಾಕ್ಸ್ ಮಾಡಿದ್ದ. ಬಳಿಕ ಜೂನ್ 7ರಂದು ಮಧ್ಯಾಹ್ನ ಹೋಟೆಲ್ನಿಂದ ಚೆಕ್ ಔಟ್ ಆಗುವಾಗ ನಕಲಿ ನೋಟುಗಳ ಮೂಲಕವೇ 3 ಸಾವಿರ ರೂ. ಬಿಲ್ ಪಾವತಿಸಿ ತೆರಳಿದ್ದ.
ಅದೇ ದಿನ ಬೆಳಗ್ಗೆ ಹೋಟೆಲ್ನಿಂದ ಸಂಗ್ರಹಿಸಲಾದ ತ್ಯಾಜ್ಯದಲ್ಲಿ ಕೆಲ ನಕಲಿ ನೋಟುಗಳು ಪತ್ತೆಯಾಗಿರುವುದನ್ನು ಪೌರಕಾರ್ಮಿಕ ಸಿಬ್ಬಂದಿ ಹೋಟೆಲ್ ಮ್ಯಾನೇಜರ್ ಬಳಿ ಹೇಳಿದ್ದ.ಆರೋಪಿಯ ಚೆಕ್ ಔಟ್ ಆದ ಕೆಲ ಸಮಯದ ಬಳಿಕ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಆತ ನೀಡಿದ್ದ ನೋಟುಗಳನ್ನು ಪರಿಶೀಲಿಸಿದಾಗ ಅವು ನಕಲಿ ಎಂದು ತಿಳಿದು ಬಂದಿತ್ತು.
ಬಳಿಕ ಆತ ತಂಗಿದ್ದ ರೂಮ್ ನಲ್ಲಿ ಪರಿಶೀಲಿಸಿದಾಗ ಬಿಳಿ ಹಾಳೆಗಳ ಬಂಡಲ್, ನಕಲಿ ನೋಟ್ ನ ಚೂರುಗಳು ಪತ್ತೆಯಾಗಿದ್ದವು. ನಂತರ ಹೋಟೆಲ್ ಮ್ಯಾನೇಜರ್ ಮೊಹಮ್ಮದ್ ಷರೀಫ್ ಉದ್ದೀನ್ ಅವರು ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ದೂರು ನೀಡಿದ್ದರು.
ಆರೋಪಿ ನೀಡಿದ್ದ ಆಧಾರ್ನಲ್ಲಿದ್ದ ವಿಳಾಸ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಟೆಕ್ ಸ್ ಟೈಲ್ಸ್ ಉದ್ಯಮಿಯೊಬ್ಬರ ಮಗನಾಗಿರುವ ಕ್ರಿಷ್ ಮಾಲಿ, ಮನೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿಕೊಂಡು ಆನ್ ಲೈನ್ ಮೂಲಕ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿದ್ದ. ತನ್ನ ಬಳಿಯಿರುವ ಹಣ ಎಷ್ಟು ದಿನಗಳ ಕಾಲ ಸಾಲಬಹುದು ಎಂದು ಯೋಚಿಸಿದ್ದ ಆರೋಪಿ, ಅದಕ್ಕಾಗಿ ತಾನೇ ಖೋಟಾ ನೋಟುಗಳನ್ನು ಪ್ರಿಂಟ್ ಮಾಡಲು ಯೋಚಿಸಿದ್ದ ಎನ್ನಲಾಗಿದೆ.
ಖೋಟಾ ನೋಟ್ ಪ್ರಿಂಟ್- ಆರೋಪಿ ಬಂಧನ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು