ಬೆಂಗಳೂರು: ಬೈಕ್ ಟ್ಯಾಕ್ಸಿ ಸೇವೆಯನ್ನು ರದ್ದುಗೊಳಿಸುವ ಬದಲು ಸೂಕ್ತ ನಿಯಮ ರೂಪಿಸಬೇಕೆಂದು ಒತ್ತಾಯಿಸಿ ವಿಧಾನಸೌಧದ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದ 11 ಮಂದಿ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಧಾನಸೌಧದ ಮುಂದೆ ಯಾವುದೇ ಪ್ರತಿಭಟನೆ ನಡೆಸುವುದು ಹಾಗೂ ಗುಂಪು ಸೇರುವುದು ಕಾನೂನುಬಾಹಿರ. ಹೀಗಿದ್ದರೂ ಯಾವುದೇ ಮಾಹಿತಿ ನೀಡದೆ ಶಿವಮೊಗ್ಗ, ಮೈಸೂರು ಹಾಗೂ ಹಾಸನ ಸೇರಿದಂತೆ ವಿವಿಧ ಕಡೆಗಳಿಂದ ಬೈಕ್ ಟ್ಯಾಕ್ಸಿ ಸವಾರರು ಜೂನ್ 21ರಂದು ಬಂದು ಗುಂಪುಗೂಡಿ ಸರ್ಕಾರದ ವಿರುದ್ಧ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ದರು.ಈ ಸಂಬಂಧ ಸ್ವಯಂಪ್ರೇರಿತವಾಗಿ ವಿಧಾನಸೌಧದ ಪೊಲೀಸರು 11 ಮಂದಿ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಜೂನ್ 16 ರಿಂದಲೇ ಬೈಕ್ ಟ್ಯಾಕ್ಸಿ ಸೇವೆಗಳ ನಿಷೇಧ ಅಧಿಕೃತವಾಗಿ ಜಾರಿಯಾಗಿದೆ. ಬೈಕ್ ಟ್ಯಾಕ್ಸಿ ಸೇವೆ ನೀಡಲು ಗೈಡ್ ಲೈನ್ಸ್ ಜಾರಿಯಾಗುವವರೆಗೂ ಸೇವೆಗಳನ್ನು ಸ್ಥಗಿತಗೊಳಿಸುವ ರಾಜ್ಯ ಸರ್ಕಾರದ ಆದೇಶವನ್ನು ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿತ್ತು. ಬೈಕ್ ಟ್ಯಾಕ್ಸಿ ಕಂಪನಿಗಳು ಕೋರಿದ್ದ ಆರು ವಾರಗಳ ಕಾಲಾವಕಾಶ ಸಹ ಜೂನ್ 15ಕ್ಕೆ ಮುಕ್ತಾಯಗೊಂಡಿದ್ದು, ಮಧ್ಯಂತರ ಅನುಮತಿಗೂ ನಿರಾಕರಿಸಲಾಗಿತ್ತು. ಆದ್ದರಿಂದ ರ್ಯಾಪಿಡೋ, ಉಬರ್ ಮತ್ತಿತರ ಕಂಪನಿಗಳು ಜೂನ್ 16 ರಿಂದಲೇ ತಮ್ಮ ಆ್ಯಪ್ ಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆಯ ಆಯ್ಕೆಯನ್ನು ತೆಗೆದು ಹಾಕಿದ್ದವು.
ಟ್ಯಾಕ್ಸಿ ಬೈಕ್ ಸೇವೆ ರದ್ದು- ಪ್ರತಿಭಟನಾಕಾರರ ಬಂಧನ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು