ದೊಡ್ಡಬಳ್ಳಾಪುರ: ರಾಜ್ಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಐದು ಮಂದಿ ಮೃತಪಟ್ಟಿರುವ ದಾರುಣ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಗ್ಗೆ ನಡೆದಿದೆ.
ಮೃತರನ್ನು ದೊಡ್ಡಬಳ್ಳಾಪುರದ ಕರೇನಹಳ್ಳಿಯ ನಿವಾಸಿಗಳಾದ ನಾರಾಯಣಪ್ಪ (70), ಪುರುಷೋತ್ತಮ (62), ಕಾಳಪ್ಪ (69), ಡಿ.ಎನ್.ಈಶ್ವರಪ್ಪ (75), ಕಾರು ಚಾಲಕ ನರಸಿಂಹಮೂರ್ತಿ (50) ಎಂದು ಗುರುತಿಸಲಾಗಿದೆ.
ದೊಡ್ಡಬಳ್ಳಾಪುರದಿಂದ ಗೌರಿಬಿದನೂರು ಸಮೀಪದ ಮಂಚೇನಹಳ್ಳಿಯ ಭೀಮೇಶ್ವರ ಬೆಟ್ಟಕ್ಕೆ ಇನ್ನೋವಾ ಕಾರಿನಲ್ಲಿ 8 ಮಂದಿ ಹೋಗುತ್ತಿದ್ದರು. ದೊಡ್ಡಬಳ್ಳಾಪುರ-ಗೌರಿಬಿದನೂರು ರಸ್ತೆಯ ರಾಜ್ಯ ಹೆದ್ದಾರಿಯ ಮಾಕಳಿ ಗ್ರಾಮದ ಬಳಿ ಬರುತ್ತಿದ್ದಾಗ ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮತ್ತೊಬ್ಬ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಉಳಿದ ಮೂವರು ಗಂಭೀರ ಗಾಯಗೊಂಡಿದ್ದು, ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಭೀಕರತೆ ಎಷ್ಟಿತ್ತೆಂದರೆ ನಾಲ್ವರ ಮತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ.ಸುದ್ದಿ ತಿಳಿದು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಐದು ಮಂದಿಯ ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಭೀಕರ ಅಪಾಘಾತ- ಐದು ಮಂದಿ ಸಾವು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು