
ಉಡುಪಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಗರ್ಭವತಿಯನ್ನಾಗಿಸಿದ ಆರೋಪಿಯನ್ನು ’ದೋಷಿ’ ಎಂದು ಘೋಷಿಸಿ, 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಪೋಕ್ಸೊನ್ಯಾಯಾಲಯ ಆದೇಶಿಸಿದೆ. ಈ ಪ್ರಕರಣದ ದೋಷಿಯು ಮೂರು ಮಕ್ಕಳ ತಂದೆಯಾಗಿದ್ದು, ಬಾಲಕಿಯ ಸಂಬಂಧಿಯೂ ಆಗಿದ್ದಾನೆ. ಬಾಲಕಿಯ ಮೇಲೆ ಬಲವಂತದ ಲೈಂಗಿಕ ದೌರ್ಜನ್ಯ ಎಸಗಿದ ಈತ ಈ ವಿಷಯವನ್ನು ಪೋಷಕರಿಗೆ ತಿಳಿಸಿದರೆ ಜೀವಕ್ಕೆ ತೊಂದರೆ ಮಾಡುವುದಾಗಿ ಬೆದರಿಸಿದ್ದ. ಹಲವು ಬಾರಿ ಸಂತ್ರಸ್ತೆ ಮೇಲೆ ದೌರ್ಜನ್ಯ ಎದುರಿಸಿರುವುದು ತನಿಖೆಯಿಂದ ತಿಳಿದು ಬಂದಿತ್ತು. 2024ರ ಆಗಸ್ಟ್ ನಲ್ಲಿ ನೊಂದ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿದ್ದು, ತಪಾಸಣೆ ಒಳಪಡಿಸಿದಾಗ ಗರ್ಭವತಿಯಾಗಿರುವುದು ತಿಳಿದು ಬಂದಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಬೈಂದೂರು ಸಿಪಿಐ ಸವೀತ್ರಾ ತೇಜಾ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಒಟ್ಟು 27 ಸಾಕ್ಷಿಗಳ ಪೈಕಿ 12 ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, ನೊಂದ ಬಾಲಕಿಯ ಸಾಕ್ಷಿ ಮತ್ತು ಡಿಎನ್ ಎ ವರದಿ ಆಧರಿಸಿ ಆರೋಪಿಯನ್ನು ’ದೋಷಿ’ ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈಟಿ ರಾಘವೇಂದ್ರ ವಾದಿಸಿದ್ದಾರೆ. ಅಪರಾಧಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗು 25 ಸಾವಿರ ರೂ. ದಂಡ ವಿಧಿಸಲಾಗಿದೆ. ಸರಕಾರದಿಂದ ಸಂತ್ರಸ್ತ ಬಾಲಕಿಗೆ 3 ಲಕ್ಷ ರೂ ಪರಿಹಾರ ನೀಡುವಂತೆಯೂ ಆದೇಶಿಸಲಾಗಿದೆ.
ಬಾಲಕಿಯ ಅತ್ಯಾಚಾರಗೈದ ಅಪರಾಧಿಗೆ 20 ವರ್ಷ ದಂಡಸಮೇತ ಕಠಿಣ ಜೈಲುಶಿಕ್ಷೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


