
ಪಾವಗಡ: ದ್ವಿಚಕ್ರ ವಾಹನಕ್ಕೆ ಬಾಲಕ ಅಡ್ಡಬಂದನೆಂಬ ಕಾರಣಕ್ಕೆ ವಾಹನ ಸವಾರ ಬಾಲಕನ ಕುಟುಂಬದವರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ ಪರಿಣಾಮ ವೃದ್ಧರೊಬ್ಬರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಅರಸೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ಳಿಬಟ್ಲು ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಹನುಮಂತರಾಯಪ್ಪ (60) ಎನ್ನಲಾಗಿದ್ದು, ಹಲ್ಲೆ ಮಾಡಿದ ಆರೋಪಿ ಅದೇ ಗ್ರಾಮದ ವಾಲ್ಮೀಕಿ ಅಲಿಯಾಸ್ ಓಬಳಪತಿ (45) ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ಬಂಧನಕ್ಕಾಗಿ ಶೋಧ ನಡೆಸಿದ್ದಾರೆ.
ಸೆಪ್ಟೆಂಬರ್ 10 ಬುಧವಾರ ಬೆಳ್ಳಿಬಟ್ಲು ಗ್ರಾಮದ ಬಾಲಾಜಿ (8) ಎಂಬ ಬಾಲಕ ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದಾಗ ಬೈಕಿಗೆ ಅಡ್ಡಬಂದನೆಂದು ಕೋಪದಿಂದ ಓಬಳಪತಿ ಬಾಲಕನ ಅಜ್ಜ ಹನುಮಂತರಾಯಪ್ಪನನ್ನು ಬೈದು ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ, ಜೊತೆಗೆ ಬಾಲಕನ ಅಜ್ಜಿ ಲಕ್ಷ್ಮಿದೇವಿ ಮತ್ತು ಬಾಲಕನ ತಂದೆ ವೆಂಕಟೇಶ ಎಂಬುವರ ಮೇಲೂ ಹಲ್ಲೆ ನಡೆಸಿದ್ದಾನೆ.
ಹನುಮಂತರಾಯಪ್ಪನ ತಲೆಗೆ ಬಲವಾದ ಪೆಟ್ಟುಬಿದ್ದು, ಕಿವಿಯಲ್ಲಿ ರಕ್ತ ಬಂದಿದೆ. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲು ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳುವಷ್ಟರಲ್ಲಿ ಗುರುವಾರ ಆತ ಮೃತಪಟ್ಟಿದ್ದಾನೆ.
ಈ ವಿಷಯವಾಗಿ ಪೊಲೀಸರಿಗೆ ದೂರು ನೀಡಿದರೆ ನಿಮ್ಮನ್ನೂ ಸಾಯಿಸುತ್ತೇನೆಂದು ಆರೋಪಿ ಬೆದರಿಕೆ ಹಾಕಿದ್ದಾನೆ. ನೆರೆ ಹೊರೆಯವರು ಧೈರ್ಯ ತುಂಬಿದ ಮೇಲೆ ಮೃತನ ಮಗಳು ರೂಪ ಶುಕ್ರವಾರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ನೀಡಿದ್ದು, ತಲೆಮರೆಸಿ ಕೊಂಡಿರುವ ಆರೋಪಿಗಾಗಿ ಶೋಧ ನಡೆಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ದೊಣ್ಣೆಯಿಂದ ಹಲ್ಲೆ- ವೃದ್ಧ ಸಾವು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


