
ಬೆಂಗಳೂರು: ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ತಮ್ಮ ಕ್ಷೇತ್ರದಲ್ಲಿ ಪಟಾಕಿ ಹಂಚುವ ವೇಳೆ ತಮ್ಮ ಜೊತೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕುಸುಮಾ ಹನುಮಂತರಾಯಪ್ಪ ವಿರುದ್ಧ ಕಿಡಿಕಾರಿದ್ದಾರೆ.
ಮುನಿರತ್ನ ಜನರಿಗೆ ಹಂಚಲೆಂದು ಪಟಾಕಿ ತಂದಿದ್ದ ಕಾರಣ ಪೊಲೀಸರು ಅವರ ಕಚೇರಿಗೆ ಬೀಗ ಜಡಿದಿದ್ದಾರೆ. ಇನ್ನು ಕುಸುಮಾ ಹಾಗೂ ಮುನಿರತ್ನ ಇಬ್ಬರೂ ಪರಸ್ಪರ ಚುನಾವಣೆಗೆ ಸ್ಪರ್ಧಿಸಿದಾಗಿನಿಂದಲೂ ಹಾವು ಮುಂಗುಸಿಯಂತೆ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಾ ಬಂದಿರುವ ಇವರು ಈಗಲೂ ತಮ್ಮ ವಾಕ್ಸಮರ ಮುಂದುವರಿಸುತ್ತಿದ್ದಾರೆ. ಪಟಾಕಿ ಹಂಚುವ ವೇಳೆ ಮಾತನಾಡಿದ ಮುನಿರತ್ನ ಕುಸುಮಾ ಪತಿ ಡಿ.ಕೆ.ರವಿ ಸಾವಿನ ಸಂದರ್ಭವನ್ನು ಉಲ್ಲೇಖಿಸಿ ಚಾಟಿ ಬೀಸಿದರು. ಡಿಕೆ ರವಿ ಸತ್ತಾಗ ವಿಧಾನಸೌಧದ ಬಳಿ ಕುಳಿತುಕೊಂಡು ಅಪ್ಪ ಮಗಳು ತಲೆ ಹೊಡೆದುಕೊಂಡು ಬಾಯಿ ಬಡಿದುಕೊಂಡು ನನ್ನ ಗಂಡನನ್ನು ಕೊಂದುಬಿಟ್ರು ಎಂದು ಹೇಳಿ ಗಲಾಟೆ ಮಾಡಿ ಕೆ.ಜೆ.ಜಾರ್ಜ್ ಅವರ ರಾಜಿನಾಮೆ ಕೊಡಿಸಿ, ಬಳಿಕ ಸಿಬಿಐನವರಿಗೆ ಪ್ರಕರಣವನ್ನು ಕೊಡಿಸಿದರು. ಆಗ ಸಿದ್ದರಾಮಯ್ಯನವರ ಜತೆ ನಾನೇ ಇದ್ದೆ, ಅವತ್ತು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತದೇಹ ನೋಡಿಕೊಂಡು ಬಂದಿದ್ದೆವು, ಮರಣೋತ್ತರ ಪರೀಕ್ಷೆ ವರದಿಯನ್ನೇ ತಿರುಚಿಬಿಟ್ಟರು ಎಂದರು.
ಕಾಂಗ್ರೆಸ್ ನವರ ಜೊತೆ ಅಷ್ಟೆಲ್ಲ ಗಲಾಟೆ ಮಾಡಿ ಆಮೇಲೆ ಏನಾಯಿತು? ಅಪ್ಪ ಕಾಂಗ್ರೆಸ್ ಪಾರ್ಟಿ ಚೇರ್ಮನ್, ಮಗಳು ಎಂಎಲ್ ಎ ಆಗಬೇಕು, ಮಗಳನ್ನು ಎಂಎಲ್ ಎ ಮಾಡುವುದಕ್ಕೆ ಒಂದು ಕಡೆ ಹೋರಾಟ, ಈಯಮ್ಮ ಇಂದಿರಾ ಗಾಂಧಿ ಮಟ್ಟಕ್ಕೆ ಬೆಳೆಯುವುದಕ್ಕೆ ಹೋರಾಟ, ಇದು ನನಗೆ ಆಗಿರುವ ಅನ್ಯಾಯ, ಪಟಾಕಿ ಕೊಡುವುದಕ್ಕೂ ಸಹ ಬಿಡುತ್ತಿಲ್ಲ, ದೇವರು ಅವರಿಗೆ ಒಳ್ಳೇದು ಮಾಡಲಿ ಎಂದು ಹೇಳಿದರು.
ಕುಸುಮಾ ವಿರುದ್ಧ ಮುನಿರತ್ನ ವಾಗ್ದಾಳಿ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


