
ಬೆಂಗಳೂರು: ಐದು ನೂರು ರೂಪಾಯಿ ಮುಖಬೆಲೆಯ ನಕಲಿ ನೋಟು ವರ್ಗಾವಣೆ ಮಾಡುತ್ತಿದ್ದ ಆರೋಪ ಪ್ರಕರಣ ಸಂಬಂಧ ಮೂವರನ್ನು ಇಲ್ಲಿನ ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ರಾಜೇಶ್ವರನ್, ಮೀರನ್ ಮತ್ತು ಶೇಕ್ ಮುಹಮ್ಮದ್ ಬಂಧಿತ ಆರೋಪಿಗಳೆಂದು ಪೊಲೀಸರು ಹೇಳಿದ್ದಾರೆ.
ಸೂಟ್ ಕೇಸ್ ವೊಂದರಲ್ಲಿ ಯಾರಿಗೂ ಅನುಮಾನ ಬಾರದ ರೀತಿ ಮೇಲೆ ಹಾಗೂ ಕೆಳಗೆ 500 ರೂ. ಮುಖ ಬೆಲೆಯ ಅಸಲಿ ನೋಟುಗಳನ್ನು ಇಟ್ಟು ಮಧ್ಯದಲ್ಲಿ ನೋಟಿನ ರೀತಿಯಲ್ಲಿರುವ ಬಿಳಿ ಖಾಲಿ ಪೇಪರ್ ಗಳನ್ನು ಜೋಡಿಸಿಕೊಂಡು ಬಂದಿದ್ದು, ಜಯನಗರ 4ನೆ ಬ್ಲಾಕ್ ನಲ್ಲಿ ಸಾರ್ವಜನಿಕರಿಗೆ 10 ಲಕ್ಷ ನೀಡಿದರೆ 30 ಲಕ್ಷ ಅಂದರೆ ಮೂರು ಪಟ್ಟು ನಕಲಿ ನೋಟುಗಳನ್ನು ನೀಡುವುದಾಗಿ ಹೇಳಿ ವಂಚಿಸುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೂವರನ್ನು ಬಂಧಿಸಿ ಕಾರು, ಸೂಟ್ ಕೇಸ್, ಅದರಲ್ಲಿದ್ದ 15 ಸಾವಿರ ಅಸಲಿ ನೋಟು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಈ ಗುಂಪಿನಲ್ಲಿರುವ ಹಲವರ ಹೆಸರುಗಳನ್ನು ಹೇಳಿದ್ದು ಅವರ ಪತ್ತೆಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಹೇಳಿದ್ದಾರೆ.
ನಕಲಿ ನೋಟು ವರ್ಗಾವಣೆ- ಮೂವರ ಬಂಧನ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


