
ತುಮಕೂರು: ಊರಿನ ಹೊರಗಿರುವ ತೋಟದ ಮನೆ. ಅಪ್ಪ ಅಮ್ಮ ಇಬ್ಬರು ಮಕ್ಕಳು ವಾಸವಾಗಿದ್ದ ಕುಟುಂಬದ ಮೇಲೆ ರಾತ್ರೋರಾತ್ರಿ ದುಷ್ಕರ್ಮಿಗಳು ಮನೆ ಹಿರಿಯನ ಮೇಲೆ ದಾಳಿ ಮಾಡಿದ್ದಾರೆ. ಮಗಳ ಕಣ್ಣೆದುರೇ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ, ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹುಳಿಯಾರು ಹೋಬಳಿಯಲ್ಲಿ ನಡೆದ ಕೃತ್ಯಕ್ಕೆ ಊರಿಗೆ ಊರೇ ಬೆಚ್ಚಿ ಬಿದ್ದಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹುಳಿಯಾರು ಹೋಬಳಿಯ ಕೆಂಕೆರೆ ನಿವಾಸಿ ಮಂಜುನಾಥ್, ದಿನಸಿ ಅಂಗಡಿ ಹಾಗೂ ಟೆಂಟ್ ಹೌಸ್ ನಡೆಸುತ್ತಿದ್ದರು. ಊರಿನ ಹೊರಗಡೆಯ ತೋಟದ ಮನೆಯಲ್ಲಿ ವಾಸವಿದ್ದರು. ನಿನ್ನೆ ತಡರಾತ್ರಿ ಬರ್ಬರವಾಗಿ ಹತ್ಯೆಯಾಗಿದ್ದಾರೆ.
ಮಂಜುನಾಥ್ ತನ್ನಿಬ್ಬರು ಮಕ್ಕಳ ಜೊತೆ ಮನೆಯಿಂದ ಹೊರಗೆ ಬಂದಿದ್ದರು. ಟೆಂಟ್ ಹೌಸ್ನ ಅಂಗಡಿ ಮುಂದೆ ಮಕ್ಕಳ ಜೊತೆ ಮಾತನಾಡುತ್ತಾ ಕುಳಿತಿದ್ದರಂತೆ ಆದರೆ, ಈ ವೇಳೆ ಪ್ರತ್ಯಕ್ಷರಾದ ನಾಲ್ಕೈದು ಜನರ ಗುಂಪು ಮಂಜುನಾಥ್ ಮೇಲೆ ದಾಳಿಗೆ ಮುಂದಾಗಿದ್ದಾರೆ. ಇದನ್ನು ಕಂಡ ಓರ್ವ ಮಗಳು ಮನೆಯೊಳಗೆ ಓಡಿದರೆ, ಮತ್ತೊಬ್ಬಳನ್ನು ದುಷ್ಕರ್ಮಿ ಹಿಡಿದು ಕಿರುಚಾಡದಂತೆ ಬಾಯಿ ಮುಚ್ಚಿಸಿದ್ದಾರೆ. ಆ ಬಳಿಕ ಚಾಕು ತೆಗೆದ ಹಂತಕರು ಮಂಜುನಾಥ್ನ ಎದೆಭಾಗ ಸೇರಿದಂತೆ ಹಲವು ಕಡೆ ಇರಿದು ಎಸ್ಕೇಪ್ ಆಗಿದ್ದಾರೆ.
ಇನ್ನು ತಂದೆಯ ಹತ್ಯೆಯ ದೃಶ್ಯ ಕಣ್ಣಾರೆ ಕಂಡ ಮಗಳು ಬೆಚ್ಚಿಬಿದಿದ್ದಾಳೆ. ಬಳಿಕ ಆಕೆ ಮನೆಗೆ ಹೊಗಿ ತಾಯಿಗೆ ವಿಚಾರ ತಿಳಿಸಿದ್ದಾಳೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹಂತಕರು ಮುಖಕ್ಕೆ ಮಾಸ್ಕ್ ಹಾಗೂ ಗ್ಲೌಸ್ ತೊಟ್ಟು ಬಂದಿದ್ದು ಯಾರು ಹಾಗೂ ಯಾವ ಕಾರಣಕ್ಕೆ ಕೃತ್ಯವೆಸಗಿದ್ದಾರೆಂದು ಪೊಲೀಸರು ತನಿಖೆ ನಡೆಸಿದ್ದಾರೆ.
ಸದ್ಯ ಘಟನೆ ಸಂಬಂಧ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



