
ಬೆಂಗಳೂರು: ನಾಡಿನ ಐಕಾನಿಕ್ ಉತ್ಪನ್ನವಾದ ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರ ರಾಯಭಾರಿಯಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಮಂಗಳವಾರ ಅಧಿಕೃತವಾಗಿ ಕಾರ್ಯಾರಂಭಿಸಿದರು. ಶತಮಾನಕ್ಕೂ ಹೆಚ್ಚಿನ ಇತಿಹಾಸವಿರುವ ಕೆಎಸ್ಡಿಎಲ್ ಸಂಸ್ಥೆಯ ಪ್ರಚಾರ ರಾಯಭಾರಿಯಾಗಿ ಹೊಸ ಅಧ್ಯಾಯ ಆರಂಭಿಸಿದರು. ಇದಕ್ಕೆ ವೇದಿಕೆಯಾಗಿದ್ದು ತಾಜ್ ವೆಸ್ಟ್ ಎಂಡ್ ಹೋಟೆಲಿನ ಝಗಮಗಿಸುವ ಸಭಾಂಗಣ.
57 ಉತ್ಪನ್ನಗಳ ಬಿಡುಗಡೆ: ಹೌದು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹಾಗೂ ಅಧ್ಯಕ್ಷ ಸಿ.ಎಸ್.ಅಪ್ಪಾಜಿ ನಾಡಗೌಡ ಅವರ ನೇತೃತ್ವದಲ್ಲಿ ಕೆಎಸ್ಡಿಎಲ್, ಹೊಸ ಯುಗಕ್ಕೆ ಕಾಲಿಟ್ಟಿದೆ. ಇದಕ್ಕೆ ಸಾಕ್ಷಿಯಾಗಿ ಹಾಲುಬಣ್ಣದ ಬೆಡಗಿ ತಮನ್ನಾ ಕರ್ನಾಟಕದ ಹೆಮ್ಮೆಯ ಸಂಕೇತ, ಹೆಂಗಳೆಯರ ಅಚ್ಚುಮೆಚ್ಚಿನ ತಿಳಿಗೆಂಪು ಬಣ್ಣದ ಮೈಸೂರು ಸಿಲ್ಕ್ ಸೀರೆಯುಟ್ಟು ವಿಶೇವಾಗಿ ಸಿದ್ಧಪಡಿಸಿದ್ದ ವೇದಿಕೆ ಮೇಲೆ ಬೆಳಕಿನ ಹೊನಲಿನಲ್ಲಿ ನಗೆ ಸೂಸುತ್ತ ಪ್ರತ್ಯಕ್ಷರಾದರು. ಹೊಸ ಪ್ಯಾಕ್ನ ರೂಪ ತಾಳಿರುವ ಮೈಸೂರು ಸ್ಯಾಂಡಲ್ ಸೋಪ್ ಜತೆಗೆ ಸಂಸ್ಥೆಯ 57 ಉತ್ಪನ್ನಗಳನ್ನು ಬಿಡುಗಡೆ ಮಾಡಿದರು.
ನವನವೀನ ಪ್ಯಾಕಿಂಗ್ ಪಡೆದುಕೊಂಡಿರುವ ಉತ್ಪನ್ನಗಳಲ್ಲಿ ಗಂಧದ ಎಣ್ಣೆ, ಮಲ್ಲಿಗೆ (ಜಾಸ್ಮೀನ್) ಪರಿಮಳದ ಸೋಪು, ಸುಗಂಧದ್ರವ್ಯ, ಟೂತ್ ಪೇಸ್ಟ್, ಕೊಬ್ಬರಿ ಎಣ್ಣೆ, ಪೆಟ್ರೋಲಿಯಂ ಜೆಲ್ಲಿ, ಸಾವಯವ ಉತ್ಪನ್ನಗಳವರೆಗೆ 60 ಉತ್ಪನ್ನಗಳಿವೆ. ಇದರೊಂದಿಗೆ ಕೆಎಸ್ಡಿಎಲ್ನ ಮುಂದಿನ ಹಾದಿ ಅಲ್ಲಿ ತೆರೆದುಕೊಂಡಿತು. ಜತೆಯಲ್ಲೇ ತಮನ್ನಾ ಸಂಸ್ಥೆಯ ಪರವಾಗಿ ನಡೆಸಿರುವ ಪ್ರಚಾರದ ಹತ್ತಾರು ಜಾಹೀರಾತುಗಳು ಕೂಡ ಬಿಡುಗಡೆಯಾದವು. ಇದೇ ಸಂದರ್ಭದಲ್ಲಿ ಸಂಸ್ಥೆಯ ಇತಿಹಾಸವನ್ನು ಕಟ್ಟಿಕೊಡುವ ’ಸುಗಂಧ ಸಿರಿ’ ಮತ್ತು ’ಅರೋಮ್ಯಾಟಿಕ್ ಜರ್ನೀಸ್’ ಕಾಫಿ ಟೇಬಲ್ ಪುಸ್ತಕಗಳ ಲೋಕಾರ್ಪಣೆಯೂ ನೆರವೇರಿತು.
ತಮನ್ನಾ ಭಾಟಿಯಾ ಮಾತನಾಡಿ, ’’ಮೈಸೂರು ಸ್ಯಾಂಡಲ್ ಸೋಪು ಕೇವಲ ಒಂದು ಸಾಬೂನಲ್ಲ. ಇದರೊಂದಿಗೆ ಭಾವನೆಗಳು, ಬಾಲ್ಯ ಮತ್ತು ಸುಮಧುರ ನೆನಪುಗಳೆಲ್ಲ ಹೆಣೆದುಕೊಂಡಿವೆ. ಇದು ಪರಿಪೂರ್ಣತೆ ಮತ್ತು ಸತ್ಯಗಳ ಸಂಗಮ. ಮಾರುಕಟ್ಟೆಯಲ್ಲಿ ಇದಕ್ಕೆ ಸಾಟಿಯಾದ ಇನ್ನೊಂದು ಸೋಪ್ ಇಲ್ಲ. ಮೈಸೂರು ಸ್ಯಾಂಡಲ್ ಸೋಪ್ಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಮುಂದಿನ ಎರಡು ವರ್ಷ ನಾನು ಈ ಗುಣಮಟ್ಟದ ಉತ್ಪನ್ನಗಳ ರಾಯಭಾರಿಯಾಗಿ ಕೆಲಸ ಮಾಡಲಿದ್ದೇನೆ’’ ಅಂತಾ ಹೇಳಿದರು.
ಬಳಿಕ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ಕೆಎಸ್ಡಿಎಲ್ ಕೇವಲ ಸ್ಯಾಂಡಲ್ ಸೋಪ್ಗೆ ಮಾತ್ರ ಸೀಮಿತವಾಗಿಲ್ಲ. ನಾವೀಗ ಜಾಸ್ಮೀನ್ ಪರಿಮಳದ ಐಷಾರಾಮಿ ಸೋಪನ್ನೂ ತಯಾರಿಸುತ್ತಿದ್ದೇವೆ. ಮಲ್ಲಿಗೆಯ ತೈಲ ಲೀಟರಿಗೆ 4 ಲಕ್ಷ ರೂಪಾಯಿಗೂ ಜಾಸ್ತಿ ಇದೆ. ನಮ್ಮಲ್ಲಿ ತಯಾರಾಗುವ ಈ ಸೋಪ್ಗೆ 400 ರೂಪಾಯಿ ಇಟ್ಟಿದ್ದೇವೆ. ಯೂರೋಪಿನ ಮಾರುಕಟ್ಟೆಯಲ್ಲಿ ಈ ತರಹದ ಸಾಬೂನಿಗೆ ಭಾರೀ ಬೇಡಿಕೆ ಇದೆ. ಇದೇ ರೀತಿಯಲ್ಲಿ ಸುಗಂಧ ದ್ರವ್ಯಗಳ ವಲಯವನ್ನೂ ಪ್ರವೇಶಿಸಿದ್ದೇವೆ. ಇದಕ್ಕಾಗಿ ಸಂಸ್ಥೆಯ ಉನ್ನತಾಧಿಕಾರಿಗಳು ಕೊಯಮತ್ತೂರು, ಕನೌಜ್ಗೆ ತೆರಳಿ, ಒಡಂಬಡಿಕೆ ಮಾಡಿಕೊಂಡು ಬಂದಿದ್ದಾರೆ’’ ಎಂದರು.
ಸಂಸ್ಥೆಯ ಅಧ್ಯಕ್ಷ ಸಿ.ಎಸ್.ಅಪ್ಪಾಜಿ ನಾಡಗೌಡ ಮಾತನಾಡಿ, ಈ ಸಾಲಿನಲ್ಲಿ ಸಂಸ್ಥೆಯ ವಹಿವಾಟು 2,000 ಕೋಟಿ ರೂ. ಮುಟ್ಟಲಿದ್ದು, ಲಾಭವು 500 ಕೋಟಿ ರೂ. ದಾಟಲಿದೆ. ಇದಕ್ಕಾಗಿ ಆಧುನಿಕ ವಹಿವಾಟು ತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ 3 ಕೋಟಿ ಫಾಲೋವರ್ಸ್ ಹೊಂದಿರುವ, ಅಖಿಲ ಭಾರತ ಮಟ್ಟದ ವರ್ಚಸ್ಸಿರುವ ತಮನ್ನಾ ಅವರನ್ನು ಬ್ರ್ಯಾಂಡ್ ಅಂಬಾಸಿರ್ಡ ಆಗಿ ನೇಮಿಸಿಕೊಂಡಿರುವುದು ಇದರ ಒಂದು ಭಾಗವಾಗಿದೆ’’ ಎಂದು ಹೇಳಿದರು.
ಮೈಸೂರು ಸ್ಯಾಂಡಲ್ ಕೇವಲ ಸಾಬೂನಲ್ಲ; ಭಾವನೆ, ಬಾಲ್ಯ ಮತ್ತು ಸುಮಧುರ ನೆನಪು: ತಮನ್ನಾ ಭಾಟಿಯಾ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


