ಬೆಂಗಳೂರು: ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿ, ಈಗ ಷರತ್ತು ಬದ್ಧವಾಗಿ ಪುನಾರಂಭ ಮಾಡಿರುವ ವಿಚಾರದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಮರ್ಥಿಸಿಕೊಂಡಿದ್ದಾರೆ.
ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು, ಸಫಾರಿ ಸ್ಥಗಿತಗೊಳಿಸಿದ್ದರಿಂದ 4 ಸಾವಿರಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದರು. ಸಫಾರಿ ದೇಶಾದ್ಯಂತ ಹಲವು ವರ್ಷದಿಂದ ನಡೆಯುತ್ತಿದೆ. ಒಂದು ಸಮೀಕ್ಷೆಯನ್ನೂ ಮಾಡದೆ ಸಫಾರಿಯನ್ನು ಏಕಾಏಕಿ ನಿಲ್ಲಿಸಿದ್ದು ಸರಿಯಲ್ಲ ಎಂದು ಟೀಕಿಸಿದರು.
ಇದಕ್ಕೆ ಉತ್ತರಿಸಿದ ಅರಣ್ಯ ಸಚಿವರು, ಸಫಾರಿಯನ್ನು ಏಕಾಏಕಿ ನಿಲ್ಲಿಸಲಿಲ್ಲ. ಕಳೆದ ನವೆಂಬರ್ ತಿಂಗಳಲ್ಲಿ 15 ದಿನಗಳ ಅಂತರದಲ್ಲಿ ಮೂರು ಅಮೂಲ್ಯ ಜೀವಹಾನಿ ಆಗಿತ್ತು. ಒಬ್ಬರು ಶಾಶ್ವತವಾಗಿ ಅಂಗವಿಕಲರಾದರು, ಹುಲಿಗಳು ಕಾಡಿನಿಂದ ಹೊರಗೆ ಬಂದು ದಾಳಿ ಮಾಡುತ್ತಿದ್ದವು. ಜನರ ಅಮೂಲ್ಯ ಜೀವ ರಕ್ಷಣೆ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಯಿತು ಎಂದು ಸ್ಪಷ್ಟಪಡಿಸಿದರು.
ಚಾಮರಾಜನಗರದಲ್ಲಿ ನವೆಂಬರ್ನಲ್ಲಿ ಈ ಸಂಬಂಧ ಸಭೆ ನಡೆಸಿದಾಗ ಹಲವು ರೈತ ಸಂಘಟನೆಗಳು ಸಫಾರಿ ರಾತ್ರಿಯವರೆಗೂ ನಡೆಯುತ್ತಿದೆ. ಹೆಚ್ಚಿನ ವಾಹನಗಳ ಸಂಚಾರ ಇದೆ. ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದರಿಂದ ವಿಚಲಿತವಾಗಿ ವನ್ಯಜೀವಿಗಳು ಕಾಡಿನಿಂದ ಹೊರಬರುತ್ತಿವೆ. ಸಫಾರಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಸಿಬ್ಬಂದಿ ಮತ್ತು ವಾಹನವನ್ನು ಕಾಡಿನಂಚಿನ ಗ್ರಾಮದಲ್ಲಿ ನಿಗಾ ಇಡಲು ಬಳಸಲಾಯಿತು ಎಂದು ತಿಳಿಸಿದರು.
ಬಂಡೀಪುರದಲ್ಲಿ 314 ಕಿ.ಮೀ. ಗಡಿ ಇದೆ. ಅದರಲ್ಲಿ 100 ಕಿ.ಮೀ ಹೆಚ್ಚು ಗಡಿ ಸಂಘರ್ಷ ಪ್ರದೇಶವಾಗಿದೆ. ಆ ಪ್ರದೇಶದಲ್ಲಿ 25 ಕಳ್ಳಬೇಟೆ ನಿಗ್ರಹ ಶಿಬಿರ ಸ್ಥಾಪಿಸಿ, ಸಿಬ್ಬಂದಿ ನೇಮಿಸಿ ಅವರಿಂದ 14 ಗಂಟೆ ಗಸ್ತು ಹಾಕಲು ಸೂಚಿಸಲಾಯಿತು. ಸಮಗ್ರ ಕಮಾಂಡ್ ಸೆಂಟರ್ ಕಾರ್ಯಾರಂಭ ಮಾಡಿಸಲಾಯಿತು. ಮುಂದೆ ಅನಾಹುತ ನಡೆಯದಂತೆ ಎಲ್ಲ ಪೂರ್ವಸಿದ್ಧತೆ ಮಾಡಿಕೊಂಡ ಬಳಿಕ ಸಫಾರಿ ಪುನಾರಂಭಿಸಲಾಗಿದೆ. ಮಿಗಿಲಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಕೇಂದ್ರ ವನ್ಯಜೀವಿ ಸಂಸ್ಥೆಯ ಪ್ರತಿನಿಧಿಯನ್ನೂ ಒಳಗೊಂಡ ತಜ್ಞರ ಸಮಿತಿ ರಚಿಸಿ, ಆ ತಜ್ಞರ ಸಮಿತಿಯ ಪ್ರಾಥಮಿಕ ವರದಿಯ ಆಧಾರದಲ್ಲಿ ಸಫಾರಿ ಪುನಾರಂಭ ಮಾಡಲಾಗಿದೆ ಎಂದು ವಿವರಿಸಿದರು.



