ಶ್ರೀ ಮಠದಲ್ಲಿ ಸೌರಶಕ್ತಿ, ಸೌದೆ ಹೊಟ್ಟು, ಭತ್ತದ ಹೊಟ್ಟು, ಅಡಿಕೆ, ತೆಂಗಿನ ಚಿಪ್ಪು ಬಳಸಿ ಪ್ರಸಾದ ವ್ಯವಸ್ಥೆ

ತುಮಕೂರು: ತುಮಕೂರಿನ ಸಿದ್ದಗಂಗಾ ಮಠದಲ್ಲಿ ಪ್ರತಿನಿತ್ಯ ಸುಮಾರು 30 ಸಾವಿರ ಜನರಿಗೆ ಸೌದೆ ಒಲೆಯಿಂದಲೇ ಆಹಾರ ತಯಾರಿಸಿ ಬಡಿಸಲಾಗುತ್ತಿದೆ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಕಾಲದಿಂದಲೂ ಮಠದಲ್ಲಿ ಸೌದೆ ಒಲೆಯನ್ನು ಬಳಸಲಾಗುತ್ತಿದೆ. ಗ್ಯಾಸ್ ಮೇಲೆ ಅವಲಂಬಿತವಾಗದೇ ಇರುವುದು ಪ್ರಸ್ತುತ ಸನ್ನಿವೇಶದಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತಿದೆ.
ಮಠದಲ್ಲಿ ನಿತ್ಯ 10 ಸಾವಿರ ಮಕ್ಕಳು ಮೂರು ಹೊತ್ತು ಊಟ ಮಾಡುತ್ತಾರೆ. ಇವರೆಲ್ಲರಿಗೂ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಅನ್ನ, ಸಾಂಬಾರು ಹಾಗೂ ಮುದ್ದೆ ನೀಡಲಾಗುತ್ತದೆ. ಸೌದೆ ಬಳಸಿ ಆಹಾರ ತಯಾರಿಸಲಾಗುತ್ತದೆ. ಅನೇಕ ವರ್ಷಗಳಿಂದಲೂ ಎಲ್ಪಿಜಿ ಸಿಲಿಂಡರ್ ಗಳನ್ನು ಅವಲಂಬಿಸದೇ ಇಲ್ಲಿ ಅಡುಗೆ ಕೆಲಸ ನಡೆಯುತ್ತಿದೆ.
ಗ್ಯಾಸ್ ಕೊರತೆಯ ಪ್ರಸ್ತುತ ಸನ್ನಿವೇಶದ ಕುರಿತು ಮಾತನಾಡಿರುವ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು, ಆದಷ್ಟು ಬೇಗ ಯುದ್ಧ ಪೂರ್ಣಗೊಳ್ಳಲಿ. ವಿವಿಧ ದೇಶಗಳಲ್ಲಿ ನಿರ್ಮಾಣವಾಗಿರುವ ಆತಂಕ ನಿವಾರಣೆಯಾಗಲಿ. ಯುದ್ಧ ನಿಲ್ಲದಿದ್ದರೆ ಜನರು ಸೌದೆಗಾಗಿ ಅರಣ್ಯ ಪ್ರದೇಶಗಳತ್ತ ಹೋಗುತ್ತಾರೆ. ಮರಗಿಡಗಳನ್ನು ಕಡಿಯಲು ಮುಂದಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿನಿತ್ಯ ಮಠಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಹೋಗುವ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಾರ್ಗಮಧ್ಯೆ ಮಠಕ್ಕೆ ಬಂದು ಊಟ ಮಾಡಿ ಹೋಗುತ್ತಾರೆ. ಹೀಗಾಗಿ ಪ್ರತಿದಿನ ಮಠದ ಮಕ್ಕಳನ್ನು ಹೊರತುಪಡಿಸಿ ಸಾವಿರಾರು ಮಂದಿ ಊಟ ಸೇವಿಸುತ್ತಾರೆ. ಪ್ರತಿನಿತ್ಯ ಅನ್ನ ಹಾಗೂ ಸಾಂಬಾರು ತಯಾರು ಮಾಡಲು ಸೌದೆ ಒಲೆಯನ್ನು ಸ್ಟೀಮ್ ಆಗಿ ಪರಿವರ್ತಿಸಿ ಬಳಸಿಕೊಳ್ಳಲಾಗುತ್ತದೆ. ಮಠದಲ್ಲಿ ಸೌರಶಕ್ತಿಯನ್ನೂ ಬಳಸಿಕೊಳ್ಳಲಾಗುತ್ತದೆ. ಸಂಜೆಯ ವೇಳೆ ಒಂದು ಹೊತ್ತು ಅಡುಗೆ ತಯಾರಿಸಲು ಅದನ್ನು ಬಳಸಿಕೊಳ್ಳಲಾಗುತ್ತದೆ ಎಂದು ಸಿದ್ದಲಿಂಗ ಸ್ವಾಮೀಜಿ ವಿವರಿಸಿದರು.

ಸಾಂಬಾರು ಹಾಗೂ ಚಪಾತಿ ಮಾಡಲು ಸೌದೆ ಹೊಟ್ಟನ್ನು ಕೂಡ ಬಳಸಿಕೊಳ್ಳುತ್ತೇವೆ. ಸೌದೆ ಬಳಸುವ ಮುನ್ನ ರೈಸ್ ಮಿಲ್ ಗಳಲ್ಲಿ ದೊರೆಯುವ ಭತ್ತದ ಹೊಟ್ಟನ್ನು ಬಳಸುತ್ತಿದ್ದೆವು. ಆದರೆ ಪ್ರಸ್ತುತ ನಗರದಲ್ಲಿ ರೈಸ್ ಮಿಲ್ ಸಂಖ್ಯೆ ಕಡಿಮೆ ಇರುವುದರಿಂದ ಭತ್ತದ ಹೊಟ್ಟನ್ನು ಬಳಸುತ್ತಿಲ್ಲ. ಪ್ರಸ್ತುತ ಮಠದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅಡಿಕೆ ಸಿಪ್ಪೆಯನ್ನು ಸಂಗ್ರಹಿಸಿ ತರುತ್ತಾರೆ. ಅದನ್ನು ಒಣಗಿಸಿ ನಂತರ ಉರುವಲಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೊಪ್ಪಳದ ಧಾರ್ಮಿಕ ಕೇಂದ್ರ ಗವಿಮಠ ಹಾಗೂ ಹುಬ್ಬಳ್ಳಿಯ ಸಿದ್ಧಾರೂಢರ ಮಠದಲ್ಲಿಯೂ ಅಡುಗೆ ಅನಿಲ ಕೊರತೆಯ ನಡುವೆಯೂ ದಾಸೋಹ ಹಾಗೂ ವಸತಿ ನಿಲಯದ ಊಟ ವ್ಯವಸ್ಥೆಗೆ ಯಾವುದೇ ತೊಂದರೆ ಉಂಟಾಗಿಲ್ಲ. ಕೊಪ್ಪಳದ ಗವಿಮಠದಲ್ಲಿ ಪ್ರಾಚೀನ ಕಾಲದಿಂದಲೂ ಸೌದೆ ಒಲೆ ಜೊತೆಗೆ ಸೌದೆ ಬಾಯ್ಲರ್ ವ್ಯವಸ್ಥೆ ಬಳಸುತ್ತಿರುವುದರಿಂದ ಅನ್ನ ಸಂತರ್ಪಣೆಗೆ ಯಾವುದೇ ಸಮಸ್ಯೆ ಬಂದಿಲ್ಲ. ಗವಿಸಿದ್ದೇಶ್ವರ ವಸತಿ ನಿಲಯದಲ್ಲಿ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಸವಾಗಿದ್ದಾರೆ. ಅವರಿಗೆ ಪ್ರತಿದಿನ ಮೂರು ಹೊತ್ತು ಊಟ ತಯಾರಿಸಲಾಗುತ್ತದೆ. ಜೊತೆಗೆ ಗವಿಮಠದಲ್ಲಿ ನಡೆಯುವ ನಿತ್ಯ ದಾಸೋಹದಲ್ಲಿ ನಿತ್ಯ ಸುಮಾರು 4ರಿಂದ 5 ಸಾವಿರ ಜನರಿಗೆ ಅನ್ನಸಂತರ್ಪಣೆ ಮಾಡಲಾಗುತ್ತದೆ. ಇದುವರೆಗೆ ಪ್ರಸಾದ ವಿತರಣೆಗೆ ಯಾವುದೇ ಸಮಸ್ಯೆ ಆಗಿಲ್ಲ.



