ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲು ರಾಜ್ಯ ಸರ್ಕಾರ ಸೋಮವಾರ ಅನುಮೋದನೆ ನೀಡಿದೆ. ಹೀಗಾಗಿ ಕ್ರಿಕೆಟ್ ಪಂದ್ಯಕ್ಕೆ ಇದ್ದ ಅಡೆತಡೆಗಳೆಲ್ಲಾ ದೂರವಾಗಿವೆ.
ವಿಶ್ವದ ಅತಿದೊಡ್ಡ ಟಿ20 ಲೀಗ್ನ 19ನೇ ಆವೃತ್ತಿಯು ಮಾರ್ಚ್ 28ರಂದು ಆರಂಭವಾಗಲಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ವೇಳಾಪಟ್ಟಿ ಪ್ರಕಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.
ಗೃಹ ಸಚಿವ ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ಮತ್ತು ಕೆಎಸ್ಸಿಎ, ಆರ್ಸಿಬಿ ಮತ್ತು ಅವರ ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಡಿಎನ್ಎ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ನಂತರ ಔಪಚಾರಿಕ ಅನುಮೋದನೆ ದೊರೆತಿದೆ.
ತಜ್ಞರ ಸಮಿತಿಯು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೈಗೊಂಡ ಸಿದ್ಧತೆ ಮತ್ತು ಅನುಸರಣೆ ಕ್ರಮಗಳನ್ನು ವಿವರಿಸುವ ತನ್ನ ವರದಿಯನ್ನು ಮಂಡಿಸಿತ್ತು. ತಜ್ಞರ ಸಮಿತಿ ಶಿಫಾರಸುಗಳ ಆಧಾರದ ಮೇಲೆ ಕೈಗೊಂಡ ವ್ಯವಸ್ಥೆಗಳನ್ನು ವಿವರವಾಗಿ ಪರಿಶೀಲಿಸಿದ ನಂತರ ಗೃಹ ಸಚಿವರು ಬೆಂಗಳೂರಿನ ಐಕಾನಿಕ್ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬರುವ ಐಪಿಎಲ್ ಪಂದ್ಯಗಳನ್ನು ನಡೆಸಲು ಅನುಮೋದನೆ ನೀಡಿದ್ದಾರೆ ಎಂದು ಕೆಎಸ್ಸಿಎ ವಕ್ತಾರ ವಿನಯ್ ಮೃತ್ಯುಂಜಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಆವೃತ್ತಿಯ ಉದ್ಘಾಟನಾ ಪಂದ್ಯದ ಜೊತೆಗೆ ಆರ್ಸಿಬಿ ಅನ್ ಬಾಕ್ಸಿಂಗ್ ಕಾರ್ಯಕ್ರಮ ಮತ್ತು ಪಂದ್ಯಾವಳಿ ಉದ್ಘಾಟನಾ ಸಮಾರಂಭವನ್ನು ಸಹ ಆಯೋಜಿಸಲಿದೆ.
ಆರ್ಸಿಬಿ ತನ್ನ ಏಳು ತವರು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡುವುದಾಗಿ ಮತ್ತು ಉಳಿದ ಎರಡು ಪಂದ್ಯಗಳನ್ನು ರಾಯಪುರದ ಶಾಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡಲಾಗುವುದು ಹಿಂದೆ ಘೋಷಿಸಿತ್ತು.



