
ಬೆಂಗಳೂರು: ಮಾತೃತ್ವ ರಜೆ ನಂತರ (ಹೆರಿಗೆ ರಜೆ) ಕರ್ತವ್ಯಕ್ಕೆ ಮರಳುವ ಶಿಕ್ಷಕಿಯರಿಗೆ ಐದು ವರ್ಷ ಅವರು ಇಚ್ಚಿಸುವ ಶಾಲೆಗಳಿಗೆ ನಿಯುಕ್ತಿ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ವಿಧಾನಪರಿಷತ್ನಲ್ಲಿ ಬಿಜೆಪಿ ಸದಸ್ಯ ವೈ.ಎಂ.ಸತೀಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಗುವಿನ ವಯಸ್ಸು ಐದು ವರ್ಷ ಪೂರ್ಣಗೊಳ್ಳುವವರೆಗೆ ಅವರ ಲಾಲನೆಪಾಲನೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಶಿಕ್ಷಕಿಯರು ಮತ್ತು ಮಕ್ಕಳ ಆರೈಕೆ, ಪೋಷಣೆ ಗಮನದಲ್ಲಿಟ್ಟುಕೊಂಡು ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ 180 ದಿನಗಳ ವೇತನ ಸಹಿತ ಮಾತೃತ್ವ ರಜೆ ನೀಡಲಾಗಿದೆ. ಈ ಸೌಲಭ್ಯ ಎರಡು ಮಕ್ಕಳಿಗೆ ಅನ್ವಯಿಸುತ್ತದೆ. ಜತೆಗೆ ಅಷ್ಟೇ ಅವಧಿ (ಆರು ತಿಂಗಳು) ಒಳಗೊಂಡ ಶಿಶುಪಾಲನಾ ರಜೆಯನ್ನು ಸರ್ಕಾರಿ ಉದ್ಯೋಗದಲ್ಲಿದ್ದ ಮಹಿಳೆಯರು ತಮ್ಮ ಮಕ್ಕಳಿಗೆ 18 ವರ್ಷ ತುಂಬುವುದರ ಒಳಗೆ ಸೌಲಭ್ಯ ಪಡೆಯಬಹುದು. ಶಿಕ್ಷಕಿಯರು ಮಾತೃತ್ವದ ರಜೆಯ ಜತೆಗೆ, ಶಿಶುಪಾಲನಾ ರಜೆಯನ್ನೂ ಸಂಯೋಜಿಸಿಕೊAಡು ಪಡೆಯಬಹುದು. ಎರಡೂ ರಜೆಗಳ ಅವಧಿ ಮುಗಿದ ನಂತರ ನಾಲ್ಕು ವರ್ಷಗಳು ತಮಗೆ ಅನುಕೂಲವಾಗುವ ಶಾಲೆಗೆ ಸ್ಥಳ ನಿಯೋಜನೆ ಮಾಡಿಸಿಕೊಳ್ಳಬಹುದು. ಒಂದೇ ಶಾಲೆಗೆ ಹೆಚ್ಚಿನ ಶಿಕ್ಷಕಿಯರು ಬೇಡಿಕೆ ಸಲ್ಲಿಸಿದರೆ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ ಆದೇಶ ನೀಡಲಾಗುವುದು ಎಂದು ತಿಳಿಸಿದರು.
ಶಿಕ್ಷಕಿಯರಿಗೆ ಮಾತೃತ್ವ ರಜೆ ನಂತರ 5 ವರ್ಷ ಇಚ್ಚಿಸುವ ಶಾಲೆಗೆ ವರ್ಗ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


