
ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ ಮಾ.18ರಿಂದ ಪ್ರಾರಂಭವಾಗುತ್ತಿದೆ. ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಶುಭಾಶಯ ತಿಳಿಸಿದರು.
ಪ್ರಸ್ತುತ ಸಾಲಿನಲ್ಲಿ 8,65,968 ಮಕ್ಕಳು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲಾಗಿದೆ. ಮೂರು ಹಂತದಲ್ಲಿ ಪರೀಕ್ಷೆಗಳು ನಡೆಯುತ್ತವೆ. ಒಂದು ವೇಳೆ ಮೊದಲ ಹಂತದ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಎರಡನೇ ಹಂತ, ಮೂರನೇ ಹಂತದಲ್ಲಿ ಪರೀಕ್ಷೆಗೆ ಅವಕಾಶ ಇರುವುದರಿಂದ ಯಾವುದೇ ವಿದ್ಯಾರ್ಥಿಗಳು ಆತಂಕಗೊಳ್ಳದೇ ಪರೀಕ್ಷೆಯನ್ನು ಎದುರಿಸುವಂತೆ ತಿಳಿಸಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಧೈರ್ಯವಾಗಿ ಪರೀಕ್ಷೆ ಬರೆಯಲು ತಿಳಿಸಿದರು.

ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಶುಭಾಶಯ ಕೋರಿ ಮಾತನಾಡಿ, ಈ ಹಿಂದೆ ಮಕ್ಕಳು ಒತ್ತಡದಿಂದ ಪರೀಕ್ಷೆಗೆ ಹಾಜರಾಗುತ್ತಿದ್ದರು. ಈಗ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗುವ ಮಕ್ಕಳಿಗೆ ಪೋಷಕರು ಮಾನಸಿಕ ಹಿಂಸೆ ನೀಡಬಾರದು ಎಂದು ಹೇಳಿದರು. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆಗುತ್ತಿದೆ ಎಂಬ ಸುದ್ದಿಗಳು ಬರುತ್ತಿವೆ. ಈ ಬಗ್ಗೆ ಶಿಕ್ಷಣ ಸಚಿವರು ಸುದ್ದಿಗೋಷ್ಠಿ ನಡೆಸಿ ಎಚ್ಚರಿಕೆ ನೀಡುವಂತೆ ತಿಳಿಸಿದರು.


