
ತುಮಕೂರು: ತ್ರಿವಿಧ ದಾಸೋಹಿ, ಶತಾಯುಷಿ ಸಿದ್ದಗಂಗಾ ಮಠದ ಶಿವೈಕ್ಯ ಡಾ. ಶ್ರೀ ಶಿವಕುಮಾರ ಮಹಾಶಿವಯೋಗಿಗಳ 119ನೇ ಜನ್ಮದಿನೋತ್ಸವ ಏಪ್ರಿಲ್ 1ರಂದು ಸಿದ್ದಗಂಗಾ ಮಠದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈ ಅಭೂತಪೂರ್ವ ಕ್ಷಣಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಾಕ್ಷಿಯಾಗಲಿದ್ದಾರೆ. ಶ್ರೀಗಳ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನ ಎಂದು ಘೋಷಿಸುವಂತೆ ಒತ್ತಾಯ ಕೇಳಿಬಂದಿದೆ.
ಬುಧವಾರ ಪ್ರಾತಃ ಕಾಲದಲ್ಲಿ ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ನಡೆಯಲಿದೆ. ವಿವಿಧ ಮಠ ಮಾನ್ಯಗಳ ಸಾಧು ಸಂತರ ಮಂತ್ರಘೋಷಗಳೊAದಿಗೆ ಪೂಜಾ ಕೈಂಕರ್ಯ ನೆರವೇರಲಿದೆ. ರಾಷ್ಟ್ರಪತಿ ಮುರ್ಮು ಅವರು ಅಂದು ಬೆಳಗ್ಗೆ 10.30ಕ್ಕೆ ಸಿದ್ದಗಂಗಾ ಮಠಕ್ಕೆ ಆಗಮಿಸಲಿದ್ದಾರೆ. ಆರಂಭದಲ್ಲಿ ಶಿವಕುಮಾರ ಶ್ರೀಗಳ ಗದ್ದುಗೆಗೆ ಆರತಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಶ್ರೀ ಮಠದ 10 ಸಾವಿರ ವಿದ್ಯಾರ್ಥಿಗಳು ಮತ್ತು ಮಠದ ಭಕ್ತರ ಸಮ್ಮುಖದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಬರುವ ನಿರೀಕ್ಷೆ ಇದೆ. ರಾಷ್ಟ್ರಪತಿಗಳು ಕಾರ್ಯಕ್ರಮಕ್ಕೆ ಬರುವ ಹಿನ್ನೆಲೆ ಝಡ್+ ಸೆಕ್ಯೂರಿಟಿ ಇರಲಿದೆ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ಡಾ.ಶಿವಕುಮಾರ ಶ್ರೀಗಳು ಲಿಂಗೈಕೈರಾದ ದಿನವನ್ನು ದಾಸೋಹ ದಿನವನ್ನಾಗಿ ಆಚರಣೆಗೆ ತರುವಂತೆ ಭಕ್ತಾದಿಗಳಿಂದ ಆಗ್ರಹ ಇದೆ. ಕೇಂದ್ರ ಸಚಿವ ವಿ.ಸೋಮಣ್ಣ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಏ.1ರಂದು ಶಿವಕುಮಾರ ಶ್ರೀಗಳ ಜನ್ಮ ದಿನೋತ್ಸವದ ದಿನವೇ ದಾಸೋಹ ದಿನದ ಆಚರಣೆ ಬಗ್ಗೆ ಅಧಿಕೃತ ಆದೇಶ ಹೊರಡಿಸುವಂತೆ ಸಿಎಂಗೆ ಮನವಿ ಮಾಡಿದ್ದಾರೆ. ಶಿವಕುಮಾರ ಮಹಾ ಶಿವಯೋಗಿಗಳು ಜನವರಿ 21ರಂದು ಲಿಂಗೈಕೈರಾಗಿದ್ದು, ಆ ದಿನವನ್ನು ದಾಸೋಹ ದಿನ ಎಂದು ಆಚರಣೆ ಮಾಡಲಾಗುವುದು ಎಂದು ಅಂದಿನ ಬೊಮ್ಮಾಯಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.


