
ಬೆಂಗಳೂರು: ವರ್ಗಾವಣೆ ನಿಯಮಗಳ ಪ್ರಕಾರ ಸರ್ಕಾರಿ ಸಿಬ್ಬಂದಿ ಒಂದು ಜಿಲ್ಲೆಯಲ್ಲಿ ಕನಿಷ್ಠ ಏಳು ವರ್ಷ ಕರ್ತವ್ಯ ಸಲ್ಲಿಸಿದ ನಂತರವಷ್ಟೇ ಅಂತರ್ ಜಿಲ್ಲಾ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅರ್ಹರು ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಅಂತರ್ ಜಿಲ್ಲಾ ವರ್ಗಾವಣೆ ಸಿಗದೆ ಕಂಗಾಲಾಗಿರುವ ಕಾನ್ ಸ್ಟೆಬಲ್ ಗಳು ದಯಾಮರಣ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಏಳು ವರ್ಷ ತುಂಬಿದ ತಕ್ಷಣ ವರ್ಗಾವಣೆ ಖಚಿತ ಎಂದಲ್ಲ. ಅರ್ಜಿದಾರರ ಹಿರಿತನ ಮತ್ತು ಆ ಜಿಲ್ಲೆಯಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳನ್ನು ಪರಿಗಣಿಸಿ ಆದ್ಯತೆ ನೀಡಲಾಗುತ್ತದೆ. ನಿಯಮಾನುಸಾರವೇ ವರ್ಗಾವಣೆ ನಡೆಸಲಾಗುತ್ತದೆ ಎಂದು ಹೇಳಿದರು.
ಇತ್ತೀಚಿನ 402 ಪಿಎಸ್ಐ ಹುದ್ದೆಗೆ ನೇಮಕಗೊಂಡವರಲ್ಲಿ ಶೇ.80ರಷ್ಟು ಅಭ್ಯರ್ಥಿಗಳು ಉತ್ತರ ಕರ್ನಾಟಕದವರು. ದಕ್ಷಿಣ ಕನ್ನಡ ಮತ್ತು ಕೊಡಗಿನಂತಹ ಜಿಲ್ಲೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಆಯ್ಕೆ ಪ್ರಮಾಣ ತಲಾ ಶೇ.2ರಷ್ಟಿದೆ. ಹೀಗಾಗಿ, ಉತ್ತರ ಕರ್ನಾಟಕದವರನ್ನು ಅನಿವಾರ್ಯವಾಗಿ ಇತರ ಜಿಲ್ಲೆಗಳಿಗೆ ನಿಯೋಜಿಸ ಬೇಕಾಗುತ್ತದೆ. ಅವರು ಏಳು ವರ್ಷ ಅಲ್ಲಿ ಕರ್ತವ್ಯ ಸಲ್ಲಿಸುವುದು ಅನಿವಾರ್ಯ ಎಂದು ಹೇಳಿದರು.
ಕಾನ್ಸ್ಟೆಬಲ್ಗಳು ಹತಾಶೆಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಇಲಾಖೆ ನಿಮ್ಮ ಪರವಾಗಿದೆ. ನಿಯಮ ಉಲ್ಲಂಘಿಸಿ ಯಾರಿಗೂ ವರ್ಗಾವಣೆ ನೀಡಲು ಸಾಧ್ಯವಿಲ್ಲ. ಹಿರಿತನ ಆಧಾರದಲ್ಲಿ ಎಲ್ಲವನ್ನೂ ಸರಿಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.
7 ವರ್ಷ ಸೇವೆ ನಂತರ ಅಂತರ್ ಜಿಲ್ಲಾ ವರ್ಗಾವಣೆಗೆ ಅರ್ಹ: ಪರಂ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


