
ಬೆಂಗಳೂರು: ಬೆಂಗಳೂರಿನಲ್ಲಿ ಬುಧವಾರ ಸಂಜೆ ಸುರಿದ ಬಿರುಗಾಳಿ ಸಮೇತ ಧಾರಾಕಾರ ಮಳೆಗೆ 7 ಮಂದಿ ಬಲಿಯಾಗಿದ್ದಾರೆ. ಬೌರಿಂಗ್ ಆಸ್ಪತ್ರೆ ಕಾಂಪೌAಡ್ ಕುಸಿದು ಮೂವರು ಮಕ್ಕಳು ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಪೈಕಿ ಕೆಲವರು ಫುಟ್ಪಾತ್ ಬಳಿ ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಮೃತಪಟ್ಟವರ ಪೈಕಿ ಕೆಲವು ಪಾದಚಾರಿಗಳು ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಆಸ್ಪತ್ರೆ ಗೋಡೆ ಕುಸಿದ ಬೆನ್ನಲ್ಲೇ ಅಲ್ಲಿದ್ದ ಸಾರ್ವಜನಿಕರು ರಕ್ಷಣಾ ಕಾರ್ಯ ನಡೆಸಿ ಕೆಲವರನ್ನು ರಕ್ಷಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹಳೆಯ ಗೋಡೆಗೆ ದೊಡ್ಡ ಟಾರ್ಪಲ್ ಹಾಕಿ ವ್ಯಾಪಾರ ಮಾಡುತ್ತಿದ್ದರು. ದಿಢೀರನೆ ಮಳೆ ಜೋರಾಗಿ ಸುರಿದ ಕಾರಣ ರಕ್ಷಣೆಗೆ ವ್ಯಾಪಾರಿಗಳು ಮತ್ತು ಪಾದಾಚಾರಿಗಳು ಟಾರ್ಪಲ್ ಆಡಿ ನಿಂತಿದ್ದಾರೆ. ಈ ವೇಳೆ ಬಿರುಗಾಳಿ ಸಹಿತ ಮಳೆಗೆ ಗೋಡೆ ಕುಸಿದಿದೆ.
ವಿಧಾನಸೌಧಕ್ಕೂ ನುಗ್ಗಿದ ನೀರು: ಬೆಂಗಳೂರಿನಲ್ಲಿ ಸುರಿದ ಭಾರೀ ಗಾಳಿ ಸಹಿತ ಮಳೆಯಿಂದ ವಿಧಾನಸೌಧಕ್ಕೂ ನೀರು ನುಗ್ಗಿದೆ. ವಿಧಾನ ಸೌಧದ ವಿಪಕ್ಷ ನಾಯಕ ಆರ್.ಅಶೋಕ್ ಕೊಠಡಿಗೆ ನೀರು ನುಗ್ಗಿದೆ. ಕಚೇರಿಯಲ್ಲಿ ಹಲವು ವಸ್ತುಗಳು ಹಾನಿಯಾಗಿವೆ.
ಹವಾಮಾನ ಇಲಾಖೆಯು ಏಪ್ರಿಲ್ 29 ಮತ್ತು 30ರಂದು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆಯಾಗುವುದಾಗಿ ಸೂಚನೆ ನೀಡಿತ್ತು. ಜೊತೆಗೆ ಆರೆಂಜ್ ಅಲರ್ಟ್ ಸಹ ಮಾಡಿತ್ತು. ಇದೀಗ ಬೆಂಗಳೂರು ಸುತ್ತಮುತ್ತ ಮಳೆಯಾಗಿರುವುದರಿಂದ ವಾತಾವರಣ ತಂಪಾಗಿದೆ. ಏಕಾಏಕಿ ಸುರಿದ ಮಳೆಯಿಂದಾಗಿ ನಗರದ ಕೆಲೆವೆಡೆ ವಾಹನ ಸಂಚಾರದಲ್ಲಿ ವ್ಯತ್ಯಯ ಆಯಿತು. ಹೀಗಾಗಿ ಸಂಜೆ ವೇಳೆ ಮನೆ ಕಡೆ ತೆರಳುತ್ತಿದ್ದವರು ಟ್ರಾಫಿಕ್ ನಲ್ಲಿ ಸಿಲುಕಿ ಸಂಕಷ್ಟ ಎದುರಿಸಿದರು.
ನಾಳೆ ಮಳೆ ಸಾಧ್ಯತೆ: ರಾಜ್ಯದಲ್ಲಿ ಏ.30ರವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಎರಡು ದಿನ ಮಳೆಯಾಗುವ ಸಂಭವವಿದೆ. ಹಗುರದಿಂದ ಸಾಧಾರಣ ಮಳೆಯಾಗಲಿದೆ.






