ತುಮಕೂರು ದಸರಾ ಧಾರ್ಮಿಕವಾಗಿರಲಿ

ಶಕ್ತಿ ದೇವತೆ ಪ್ರತಿಷ್ಠಾಪಿಸಲು ಅರ್ಚಕರಿಂದ ಡೀಸಿಗೆ ಸಲಹೆ

12

Get real time updates directly on you device, subscribe now.


ತುಮಕೂರು: ತುಮಕೂರಿನಲ್ಲಿ ಪ್ರಥಮ ಬಾರಿಗೆ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿರುವ ದಸರಾ ಉತ್ಸವವನ್ನು ಶಕ್ತಿ ದೇವತೆ ಪ್ರತಿಷ್ಠಾಪಿಸುವ ಮೂಲಕ ಧಾರ್ಮಿಕ ಆಚರಣೆಯ ಪೂಜಾ ವಿಧಿ ವಿಧಾನಗಳೊಂದಿಗೆ ಪ್ರಾರಂಭಿಸಬೇಕೆಂದು ಜಿಲ್ಲೆಯ ವಿವಿಧ ದೇವಾಲಯಗಳಿಂದ ಆಗಮಿಸಿದ ಅರ್ಚಕರು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು.

ದಸರಾ ಉತ್ಸವದ ಧಾರ್ಮಿಕ ಪೂಜಾ ವಿಧಿ ವಿಧಾನಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಈ ಸಲಹೆ ನೀಡಲಾಯಿತು.
ದಸರಾ ಉತ್ಸವದ ಅಂಗವಾಗಿ ಅಮವಾಸ್ಯೆ ನಂತರ ಪ್ರಾರಂಭವಾಗುವ ನವರಾತ್ರಿಯ ಮೊದಲ ದಿನವಾದ ಅಕ್ಟೋಬರ್ 3 ರಂದು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶಕ್ತಿ ದೇವತೆ ಪ್ರತಿಷ್ಠಾಪಿಸಿ ಪ್ರತಿನಿತ್ಯ ವಿವಿಧ ಅಲಂಕಾರಗಳಿಂದ ದೇವಿಯನ್ನು ಸಿಂಗರಿಸಿ ಹೋಮ ಹವನಾದಿಗಳಿಂದ ಪೂಜಿಸಬೇಕು, ದೇವಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಬೆಳಗಿನಿಂದ ಸಂಜೆವರೆಗೂ ಪ್ರಸಾದ ವಿನಿಯೋಗವಾಗಬೇಕು, ಗಣಪತಿ ಪೂಜೆ, ಪೂಣ್ಯಾಹ ವಾಚನ, ಭೂಮಿ ಪೂಜೆ, ಧ್ವಜ ಪೂಜೆ, ಮಂಟಪ ಪೂಜೆ ಮತ್ತು ಧ್ವಜಾರೋಹಣ, ಗಣಪತಿ ಹೋಮ, ದುರ್ಗಾ ಹೋಮ, ಪ್ರತಿ ನಿತ್ಯ ಮಹಾ ಮಂಗಳಾರತಿ, ಮತ್ತಿತರ ಆಗಮ ಪೂಜಾ ಕೈಂಕರ್ಯ ನಡೆಯಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಮಾತನಾಡಿ ದಸರಾ ಉತ್ಸವದ ಪ್ರಯುಕ್ತ ಅಕ್ಟೋಬರ್ 3 ರಿಂದ ಪ್ರಾರಂಭವಾಗುವ ನವರಾತ್ರಿ ಹಬ್ಬವನ್ನು ಧಾರ್ಮಿಕ ರೀತಿಯಲ್ಲಿ ಆಚರಿಸಲು ಎಲ್ಲಾ ದೇವಾಲಯಗಳ ಮುಖ್ಯಸ್ಥರು, ಅರ್ಚಕರು ಪಾಲ್ಗೊಂಡು ಯಶಸ್ವಿಗೊಳಿಸಬೇಕು, ಅಲ್ಲದೆ ಅಕ್ಟೋಬರ್ 10 ರಂದು ಜರುಗುವ ದುರ್ಗಾಷ್ಟಮಿ, ಅ.11 ರಂದು ನಡೆಯುವ ಮಹಾನವಮಿ ಪೂಜೆ ಹಾಗೂ ಅ.12ರ ವಿಜಯದಶಮಿಯಂದು ಆಚರಿಸುವ ಶಮೀಪೂಜೆ ಹಾಗೂ ಬನ್ನಿಮರ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪುರಾತನ ಪರಂಪರೆ ಮುಂದುವರೆಸಬೇಕೆಂದು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಮಾತನಾಡಿ ದಸರಾ ಹಬ್ಬದ ಧಾರ್ಮಿಕ ಆಚರಣೆಗಳು ಪರಂಪರಾಗತವಾಗಿ ಆಚರಿಸಿಕೊಂಡು ಬಂದ ರೀತಿಯಲ್ಲಿ ಸಂಪನ್ನವಾಗಬೇಕು, ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಜಿಲ್ಲಾಡಳಿತದಿಂದ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತಿ ಸಿಇಒ ಜಿ.ಪ್ರಭು ಮಾತನಾಡಿ, ತುಮಕೂರಿನಲ್ಲಿ ಮೊದಲ ಬಾರಿಗೆ ಆಚರಿಸುತ್ತಿರುವ ದಸರಾ ಉತ್ಸವವು ಮುಂದಿನ ಪೀಳಿಗೆಯವರು ಸ್ಮರಿಸುವಂತಿರಬೇಕು, ಯಾವುದೇ ಜಾತಿ, ಮತ, ಧರ್ಮ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಉತ್ಸವದಲ್ಲಿ ಪಾಲ್ಗೊಂಡು ಜಿಲ್ಲೆಯ ಖ್ಯಾತಿ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಮಾತನಾಡಿ ತುಮಕೂರು ದಸರಾ ಉತ್ಸವದ ಧಾರ್ಮಿಕ ಆಚರಣೆಗಳ ವಿಧಿ ವಿಧಾನಗಳ ಬಗ್ಗೆ ಅರ್ಚಕರ ಸಂಘದ ಅಧ್ಯಕ್ಷರು ಹಾಗೂ ಪ್ರತಿನಿಧಿಗಳು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಂಡು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು, ನವರಾತ್ರಿ ಸಂದರ್ಭದಲ್ಲಿ ಪ್ರತಿನಿತ್ಯದ ದೇವಿ ಪೂಜೆಗೆ ಅರ್ಚಕರ ತಂಡ ನೇಮಿಸಲು ಹೆಸರನ್ನು ಸೂಚಿಸಬೇಕು, ನಿತ್ಯದ ಪೂಜೆಗೆ ಅಗತ್ಯ ಪೂಜಾ ಸಾಮಗ್ರಿಗಳನ್ನು ಜಿಲ್ಲಾಡಳಿತದಿಂದ ಒದಗಿಸಲಾಗುವುದು ಎಂದು ಅರ್ಚಕರಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಮುಜರಾಯಿ ತಹಶೀಲ್ದಾರ್ ಸವಿತಾ, ಅರ್ಚಕರ ಸಂಘದ ಜಿಲ್ಲಾಧ್ಯಕ್ಷ ರಾಮತೀರ್ಥನ್, ವಿವಿಧ ದೇವಾಲಯಗಳ ಅರ್ಚಕರು, ಉಪ ವಿಭಾಗಾಧಿಕಾರಿಗಳಾದ ಗೌರವ್ ಕುಮಾರ್ ಶೆಟ್ಟಿ ಹಾಗೂ ಗೋಟೂರು ಶಿವಪ್ಪ, ತಹಶೀಲ್ದಾರ್ ಗಳಾದ ರಾಜೇಶ್ವರಿ, ವರದರಾಜ್, ಶಿರೀನ್ ತಾಜ್, ದೇವರಾಯನ ದುರ್ಗ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಿ.ಹಿಮಂತರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು ಮಿರ್ಜಿ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!