
ಬೆಂಗಳೂರು: ಪಿಸ್ತೂಲ್ ನಿಂದ ಮಿಸ್ ಫೈರ್ ಆದ ಗುಂಡು ತಗುಲಿ ಯುವತಿಯ ಒಂದು ಕಿಡ್ನಿಗೆ ತೀವ್ರ ಹಾನಿಯಾದ ಘಟನೆ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರೇಚಲ್ (32) ಎಂಬವರು ಕಿಡ್ನಿ ಕಳೆದುಕೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.
ಪರವಾನಗಿ ಪಡೆದ ಪಿಸ್ತೂಲ್ ಹೊಂದಿದ್ದ ಈಕೆಯ ಸ್ನೇಹಿತನಾದ ನಿಖಿಲ್ ನಾಯಕ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ 125ಬಿ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ 25 (1), 27, 30ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಾಕ್ಸ್ ಟೌನ್ ನ ನಿವಾಸಿಯಾಗಿದ್ದ ರೇಚಲ್ ಜುಲೈ 28ರಂದು ರಾತ್ರಿ ಹೊರಮಾವು ಸಮೀಪದ ಆಶೀರ್ವಾದ ಕಾಲೊನಿಯಲ್ಲಿರುವ ನಿಖಿಲ್ ನಾಯಕ್ನ ಮನೆಗೆ ತೆರಳಿದ್ದರು. ನಿಖಿಲ್ ನಾಯಕ್ ಶೌಚಾಲಯಕ್ಕೆ ಹೋಗಿದ್ದಾಗ ರೇಚಲ್ ಆತನ ಪಿಸ್ತೂಲ್ ಹಿಡಿದು ನೋಡುತ್ತಿದ್ದಾಗ ಮಿಸ್ ಫೈರ್ ಆಗಿದೆ. ಗುಂಡು ರೇಚಲ್ ಅವರ ಹೊಟ್ಟೆಗೆ ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ನಿಖಿಲ್ ನಾಯಕ್ ಆಕೆಯನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ರೇಚಲ್ ಅವರ ಒಂದು ಕಿಡ್ನಿ ಹಾನಿಗೊಳಗಾಗಿದ್ದು, ವೈದ್ಯರು ತೆಗೆದು ಹಾಕಿದ್ದಾರೆ. ಇದೀಗ ರೇಚಲ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆಕೆಯ ಹೇಳಿಕೆ ದಾಖಲಿಸಿಕೊಳ್ಳಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯ ಬಳಿಕ ನಿಖಿಲ್ ನಾಯಕ್ ರೇಚಲ್ಳನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಸದ್ಯ ರೇಚಲ್ ಸಹೋದರಿ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಪರವಾನಗಿ ಹೊಂದಿರುವವರು ಶಸ್ತ್ರಾಸ್ತ್ರ ದುರ್ಬಳಕೆಯಾಗದಂತೆ ಇರಿಸಿಕೊಳ್ಳಬೇಕು. ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದರು.
ಮಿಸ್ ಫೈರ್ಯುವತಿ ಕಿಡ್ನಿ ಡಮರ್

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


