
ತುರುವೇಕೆರೆ: ತಾಲೂಕಿನ ಗೋಣಿ ತುಮಕೂರು ಬಳಿಯಲ್ಲಿ 5 ಜನರಿಗೆ ದಾಳಿ ನಡೆಸಿದ್ದ ತೋಟದ ಮನೆಯಲ್ಲಿ ಬಂಧಿಯಾಗಿದ್ದ ಚಿರತೆಯನ್ನು ಬುಧವಾರ ರಾತ್ರಿಯೇ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾದರು.
ಬುಧವಾರ ಸುಮಾರು ಐದು ಜನರಿಗೆ ದಾಳಿ ನಡೆಸಿದ್ದ ಚಿರತೆಯನ್ನು ರೈತರು ಧೈರ್ಯ ಮಾಡಿ ತೋಟದ ಮನೆಯಲ್ಲಿ ಕೂಡಿ ಹಾಕಿದ್ದರು, ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಕುಂ.ಇ.ಅಹಮದ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಬಂಧಿಸಲು ಕಾರ್ಯಾಚರಣೆ ಪ್ರಾರಂಭಿಸಿದ್ದರು, ಕೆಲವು ಕಾಲ ಕಾರ್ಯಾಚರಣೆ ನಡೆಸಿದರೂ ಬೋನಿಗೆ ಕೆಡವಲು ಸಾಧ್ಯವಾಗದೆ ಮೈಸೂರಿನ ಪಶು ವೈದ್ಯಾಧಿಕಾರಿ ಅರವಳಿಕೆ ತಜ್ಞ ಡಾ.ವಾಸಿಂ ಆಗಮಿಸಿ ಗನ್ ಮೂಲಕ ಚಿರತೆಗೆ ಅರವಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸಿ ನಂತರ ಬಲೆ ಮೂಲಕ ಹಿಡಿದು ಬೋನ್ ನಲ್ಲಿ ಬಂಧಿಸಿ ಬಂಡಿ ಪುರ ಅರಣ್ಯಕ್ಕೆ ಬಿಡಲು ಸಾಗಿಸಲಾಯಿತು.
ನಿಟ್ಟಿಸಿರು ಬಿಟ್ಟ ಜನತೆ: ಸುಮಾರು 5 ಜನರ ಮೇಲೆ ದಾಳಿ ನಡೆಸಿ ಮುಖ ಕೈ ಕಾಲು ಗಾಯ ಮಾಡಿದ್ದರಿಂದ ಗೋಣಿ ತುಮಕೂರು, ದೇವಿಹಳ್ಳಿ, ನಡುವನಹಳ್ಳಿ ಭಾಗದ ಜನರಲ್ಲಿ ಭಯದ ವಾತಾವರಣ ಮೂಡಿ ಜನರು ಆತಂಕ ಎದುರಿಸುವಂತಾಗಿತ್ತು. ತಾಲೂಕಿನಾದ್ಯಂತ ಚಿರತೆ ಹಾವಳಿ ಹೆಚ್ಚಾಗಿ ಕಂಡು ಬರುತ್ತಿದೆ, ರೈತರು ತೋಟಗಳಿಗೆ ತೆರಳಲು ಭಯ ಪಡುವಂತಾಗಿದೆ, ಹಗಲಿನಲ್ಲಿಯೇ ಚಿರತೆ ದಾಳಿ ನಡೆಸಿದರೆ ದನ ಕರುಗಳನ್ನು ಮೇಯಿಸುವುದು ಕಷ್ಟವಾಗುತ್ತದೆ, ಗೋಣಿ ತುಮಕೂರಿನ ಬಳಿಯ ಚಿರತೆ ದಾಳಿಯಿಂದ ಜನರು ಭಯ ಭೀತರಾಗಿದ್ದಾರೆ, ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಚಿರತೆ ಇರುವ ಕಡೆಗಳಲ್ಲಿ ವಿಶೇಷವಾಗಿ ಗಮನ ಹರಿಸಬೇಕಿದೆ, ಹೆಚ್ಚು ಕಡೆಗಳಲ್ಲಿ ಬೋನ್ ಇಟ್ಟು ಚಿರತೆ ಹಿಡಿಯಬೇಕು ಎಂದು ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್ ಗೌಡ ಒತ್ತಾಯಿಸಿದ್ದಾರೆ.
5 ಜನರಿಗೆ ದಾಳಿ ನಡೆಸಿದ್ದ ಚಿರತೆ ಸೆರೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


