
ಮೈಸೂರು: ದೇವ ಮಾನವನ ಹೆಸರೇಳಿಕೊಂಡು ನಗರದ ವ್ಯಕ್ತಿಯೊಬ್ಬರಿಂದ 2.19 ಕೋಟಿ ರೂ. ಹಣ ಹಾಗೂ 200 ಗ್ರಾಂ ಚಿನ್ನಾಭರಣವನ್ನು ವಂಚಕ ದಂಪತಿ ಲಪಟಾಯಿಸಿರುವ ಘಟನೆ ಸೆನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಮೂಲದ ರೂಪಶ್ರೀ ಕುಮಾರ್ ಹಾಗೂ ಸಂದೇಶ್ ದಂಪತಿ ನಗರದ ಜೆಎಸ್ಎಸ್ ಲೇಔಟ್ನ ನಿವಾಸಿ ಅರುಣ್ ಕುಮಾರ್ (54) ಅವರಿಗೆ ಕೇವಲ ವಾಟ್ಸಾಪ್ ಮೂಲಕವೇ ವಂಚಿಸಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
2017ರಲ್ಲಿ ಅರುಣ್ ಕುಮಾರ್ ಅವರನ್ನು ರೂಪಶ್ರೀ ಕುಮಾರ್ ಸಂಪರ್ಕಿಸಿದಾಗ ತಾವು ಅಪ್ಪಾಜಿ ಎಂಬ ದೇವಮಾನವನ ಹೆಸರೇಳಿ ನಂಬಿಸಿದ್ದಾರೆ.ಅಪ್ಪಾಜಿ ಅವರು ಹಿಮಾಲಯ ಹಾಗೂ ಕೇರಳದಲ್ಲಿ ತಪಸ್ಸು ಮಾಡಿ ನಮ್ಮ ಅಜ್ಜಿಗೆ ಇದ್ದ ಕ್ಯಾನ್ಸರ್ ಕಾಯಿಲೆ ಗುಣಪಡಿಸಿದ್ದಾರೆ ಎಂದು ಅರುಣ್ ಕುಮಾರ್ ಅವರ ವಿಶ್ವಾಸ ಗಳಿಸಿ, ನಂತರದ ದಿನಗಳಲ್ಲಿ ಮತ್ತಷ್ಟು ಸ್ನೇಹ ಬೆಳೆಸಿದ್ದಾರೆ. ಅಪ್ಪಾಜಿ ಅವರು ದೇವಮಾನವ, ಅವರ ಮೈ ಮೇಲೆ ದೇವರು ಬರುತ್ತವೆ ಎಂದು ಹೇಳಿ ಹಲವು ವಿಡಿಯೋಗಳನ್ನು ಅರುಣ್ಕುಮಾರ್ ಅವರ ಮೊಬೈಲ್ಗೆ ರವಾನಿಸಿದ್ದಾರೆ. ಮತ್ತೊಬ್ಬರ ಕಷ್ಟ ಪರಿಹರಿಸಲು ನೀವು ಹಣ ಕೊಡದಿದ್ದರೇ ನಿಮ್ಮ ಕುಟುಂಬಕ್ಕೆ ಸಂಕಷ್ಟ ಎದುರಾಗುತ್ತದೆ ಎಂದು ಹೆದರಿಸಿ ಹಂತ-ಹಂತವಾಗಿ ಬರೋಬ್ಬರಿ 2.19 ಕೋಟಿ ರೂ.ಗಳನ್ನು ವಿವಿಧ ಬ್ಯಾಂಕ್ ಗಳ ಖಾತೆಗಳಿಗೆ ವರ್ಗಾಯಿಸಿಕೊಂಡಿರುವುದಲ್ಲದೇ ಧಾರ್ಮಿಕ ಕಾರ್ಯಗಳ ಹೆಸರಿನಲ್ಲಿ 202 ಗ್ರಾಂ ಚಿನ್ನಾಭರಣ ಪಡೆದುಕೊಂಡಿದ್ದಾರೆ. ಕಳೆದ ವರ್ಷ ಅಪ್ಪಾಜಿ ಅವರನ್ನು ಭೇಟಿ ಮಾಡಬೇಕು ಎಂದು ಅರುಣ್ ಕುಮಾರ್ ಅವರು ಒತ್ತಡ ಹೇರಿದಾಗ ಅಪ್ಪಾಜಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದರಿಂದ ಅವರ ನಡವಳಿಕೆಯ ಮೇಲೆ ಅನುಮಾನಗೊಂಡು ವಿಚಾರಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಇದೀಗ ಅರುಣ್ ಕುಮಾರ್ ಅವರು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದಂಪತಿ ವಿರುದ್ಧ ಕಾನೂನು ಕ್ರಮ ಕೈಗೊಂಡು ಹಣ ವಾಪಾಸ್ ಕೊಡಿಸುವಂತೆ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೇವ ಮಾನವನ ಹೆಸರೇಳಿ ವ್ಯಕ್ತಿಗೆ ವಂಚನೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


