
ಬೆಂಗಳೂರು: ವಾಕಿಂಗ್ ಮುಗಿಸಿ ಮನೆಗೆ ಹೋಗುತ್ತಿದ್ದ ನಿವೃತ್ತ ಎಸಿಪಿ ಮೇಲೆ ಹಲ್ಲೆ ಮಾಡಿ ಚಿನ್ನದ ಸರ, ಬ್ರೇಸ್ ಲೆಟ್ ಕಿತ್ತುಕೊಂಡು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಇಲ್ಲಿನ ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಡಿ.ಜೆ.ಹಳ್ಳಿಯ ನಿವಾಸಿಗಳಾದ ಸೈಯ್ಯದ್ ಮೊಹ್ಸಿನ್ (30), ಮೊಹಮ್ಮದ್ ಸಲ್ಮಾನ್ (20) ಹಾಗೂ ಸೈಯ್ಯದ್ ಇರ್ಫಾನ್ (23) ಬಂಧಿತ ಆರೋಪಿಗಳು.ಕೆಲ ದಿನಗಳ ಹಿಂದೆ ಹೆಬ್ಬಾಳದ ಪಶು ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಬಳಿ ಹಾಡಹಗಲೇ ನಿವೃತ್ತ ಎಸಿಪಿ ಹೆಚ್.ಸುಬ್ಬಣ್ಣ ಅವರ ಮೇಲೆ ಚಾಕುವಿ ನಿಂದ ಹಲ್ಲೆಗೈದಿದ್ದ ಆರೋಪಿಗಳು 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದರೋಡೆಗೈದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಎಂದಿನಂತೆ ಬೆಳಗ್ಗಿನ ವಾಕಿಂಗ್ ಮುಗಿಸಿ 9.30ರ ಸುಮಾರಿಗೆ ಮನೆಗೆ ತೆರಳುತ್ತಿದ್ದ ಸುಬ್ಬಣ್ಣ ಅವರನ್ನು ಮಾಸ್ಕ್ ಧರಿಸಿ ಬಂದಿದ್ದ ಇಬ್ಬರು ಆರೋಪಿಗಳು ಅಡ್ಡಗಟ್ಟಿದ್ದರು. ಬಳಿಕ ಚಾಕು ತೋರಿಸಿ ಅವರ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದುಕೊಂಡಿದ್ದರು. ಕಳ್ಳರ ದಾಳಿಯನ್ನು ಪ್ರತಿರೋಧಿಸಲು ಮುಂದಾದ ಸುಬ್ಬಣ್ಣ ಅವರ ಕೈಗೆ ಚಾಕುವಿ ನಿಂದ ಹಲ್ಲೆ ಮಾಡಿ, ಕೈಯಲ್ಲಿದ್ದ ಚಿನ್ನದ ಬ್ರೇಸ್ ಲೆಟ್ ಸಹ ಕಿತ್ತುಕೊಂಡು ಕ್ಷಣಮಾತ್ರದಲ್ಲಿ ಕಾಲ್ಕಿತ್ತಿದ್ದಾರೆ.
ಬಳಿಕ ಸುಬ್ಬಣ್ಣ ಅವರು ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, ಅದರ ಆಧಾರದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಚಿನ್ನದ ಸರ ಕಿತ್ತು ಪರಾರಿಯಾಗಿದ್ದವರ ಬಂಧನ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


