
ಬೆಂಗಳೂರು: ಕನ್ನಡ ಚಿತ್ರರಂಗವನ್ನು ಪೈರಸಿ ಎಂಬ ಮಹಾಮಾರಿ ಕಾಡುತ್ತಿದ್ದು, ಇದರ ವಿರುದ್ಧ ನಟ ಕಿಚ್ಚ ಸುದೀಪ್ ಧ್ವನಿ ಎತ್ತಿದ ಬೆನ್ನಲ್ಲೇ ಈಗ ನಟ ಜಗ್ಗೇಶ್ ಕೂಡ ಆಕ್ರೋಶ ಹೊರಹಾಕಿದ್ದಾರೆ.
ಜಗ್ಗೇಶ್ ಅವರ ಸಹೋದರ ಕೋಮಲ್ ಕುಮಾರ್ ನಟನೆಯ ಕೋಣ ಸಿನಿಮಾ ಇತ್ತೀಚೆಗೆ ಪೈರಸಿಗೆ ತುತ್ತಾಗಿತ್ತು. ಈ ಕುರಿತು ಜಗ್ಗೇಶ್ ಅವರು ನೀಡಿದ್ದ ದೂರಿನನ್ವಯ ಕಾರ್ಯಪ್ರವೃತ್ತರಾದ ನಂದಿನಿ ಲೇಔಟ್ ಪೊಲೀಸರು, ಪೈರಸಿ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಫೇಸ್ ಬುಕ್ ಲೈವ್ ಬಂದು ಪೈರಸಿ ವಿರುದ್ಧ ಗುಡುಗಿರುವ ಜಗ್ಗೇಶ್, ಸಿನಿಮಾ ಪೈರಸಿ ಮಾಡುವುದು ಕೇವಲ ತಪ್ಪಲ್ಲ, ಅದು ಒಂದು ಕೊಲೆಗೆ ಸಮಾನ. ಪೈರಸಿ ಮಾಡುವ ಮೂಲಕ ನೀವು ಒಬ್ಬ ನಿರ್ಮಾಪಕನನ್ನು ಕೊಂದಂತೆ. ಇದು ಸಾರ್ವಜನಿಕವಾಗಿ ಮಾಡುವ ದರೋಡೆ, ಎಂದು ಕಟು ಶಬ್ದಗಳಲ್ಲಿ ಕಿಡಿಕಾರಿದ್ದಾರೆ.
ಕೋಮಲ್ ನಟನೆಯ ಚಿತ್ರ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವಾಗಲೇ ಅದನ್ನು ಅಕ್ರಮವಾಗಿ ಚಿತ್ರೀಕರಿಸಿ ಹರಿಬಿಡಲಾಗಿತ್ತು. ಈ ಬಗ್ಗೆ ಜಗ್ಗೇಶ್ ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣ ಕ್ರಮ ಕೈಗೊಂಡ ಪೊಲೀಸರು ತಾಂತ್ರಿಕ ನೆರವಿನೊಂದಿಗೆ ಆರೋಪಿಯನ್ನು ಪತ್ತೆ ಹಚ್ಚಿ ಕಳಿಸಿದ್ದಾರೆ. ಚಿತ್ರೋದ್ಯಮದ ಹಿತದೃಷ್ಟಿಯಿಂದ ಪೈರಸಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಈಗ ಗಾಂಧಿನಗರದಲ್ಲಿ ಜೋರಾಗಿದೆ.
ಪೈರಸಿ ಮಾಡೋದು ದರೋಡೆಗೆ ಸಮಾನ: ಜಗ್ಗೇಶ್ ಗರಂ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


