
ಬೆಂಗಳೂರು: ಹೋಂವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ 4ನೇ ತರಗತಿ ಬಾಲಕನ ಮೇಲೆ ಶಿಕ್ಷಕಿ ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ಜನವರಿ 10ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಂದಿನಿ ಲೇಔಟ್ ನಲ್ಲಿರುವ ವೀಣಾ ವಿದ್ಯಾ ಸಂಸ್ಥೆಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕಿ ಆಂಗ್ಲಿನ್ ಬಾಲಕನಿಗೆ ಬಾಸುಂಡೆ ಬರುವ ಮಟ್ಟಿಗೆ ಥಳಿಸಿದ್ದಾರೆ ಎಂದು ಬಾಲಕನ ತಾಯಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀ ತಮ್ಮ ಮಗನನ್ನು ಹಾಸ್ಟೆಲ್ ನಲ್ಲಿ ಬಿಟ್ಟು ಓದಿಸುತ್ತಿದ್ದರು. ಇತ್ತೀಚೆಗೆ ಮಗನನ್ನು ನೋಡಲು ಬಂದ ವೇಳೆ, ಆತನ ಕೈ ಮತ್ತು ದೇಹದ ಮೇಲೆ ಬಾಸುಂಡೆ ಗುರುತುಗಳನ್ನು ಕಂಡು ಶಾಕ್ ಆಗಿದ್ದರು. ಈ ವೇಳೆ ತಾಯಿಯನ್ನು ಕಂಡ ಮಗು ಅಳುತ್ತಾ ಹೋಂ ವರ್ಕ್ ಮಾಡದ ಕಾರಣ ಶಿಕ್ಷಕಿ ಆಂಗ್ಲಿನ್ ತನಗೆ ಥಳಿಸಿರುವುದಾಗಿ ಹೇಳಿದ್ದ. ಹಲ್ಲೆ ವಿಚಾರವನ್ನು ಪೋಷಕರಿಗೆ ತಿಳಿಸಿದರೆ ಕುತ್ತಿಗೆ ಹಿಸುಕುವುದಾಗಿ ಬೆದರಿಕೆಯೂ ಹಾಕಿದ್ದರಿಂದ ತಾಯಿಯ ಬಳಿ ಏನೂ ಹೇಳಿಕೊಂಡಿಲ್ಲವೆಂದೂ ಬಾಲಕ ಕಣ್ಣೀರಿಟ್ಟಿದ್ದ.
ವಿಷಯ ತಿಳಿದ ಲಕ್ಷ್ಮೀ ಈ ಬಗ್ಗೆ ಶಾಲಾ ಮುಖ್ಯಸ್ಥರನ್ನು ಪ್ರಶ್ನಿಸಿದ್ದರು. ಪೊಲೀಸರನ್ನೂ ಕರೆಯಿಸಿ ಹಲ್ಲೆ ನಡೆಸಿದ ಶಿಕ್ಷಕಿಯನ್ನು ಅಮಾನತುಗೊಳಿಸುವಂತೆಯೂ ಹೇಳಿದ್ದರು. ಈ ಮಧ್ಯೆ ಬಾಲಕ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದ. ನಂತರ ಶಿಕ್ಷಕಿ ಸಸ್ಪೆಂಡ್ ಆಗಿರಬಹುದೆಂದು ಮಗನನ್ನು ಶಾಲೆಗೆ ಕಳುಹಿಸಲು ಹೋದಾಗ ಆಕೆಯನ್ನು ಅಮಾನತುಗೊಳಿಸಿಲ್ಲವೆಂದು ತಿಳಿದು ಮತ್ತೆ ಶಾಲೆಯ ಆಡಳಿತಕ್ಕೆ ಪ್ರಶ್ನಿಸಿದಾಗಲೂ ಅವರು ನಿರ್ಲಕ್ಷ್ಯ ತೋರಿದ್ದಾರೆ. ಇದೆಲ್ಲದರಿಂದ ಆಕ್ರೋಶಕ್ಕೊಳಗಾದ ತಾಯಿ ಗುರುವಾರ ದೂರು ದಾಖಲಿಸಿದ್ದಾರೆ.
ಹೋಂವರ್ಕ ಮಾಡಿಲ್ಲವೆಂದು ಬಾಲಕನಿಗೆ ಹಲ್ಲೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


