ಕರಡಿ ಮಾಂಸ ತಿಂದ ಆರೋಪಿಗಳ ಅರೆಸ್ಟ್

21,567

Get real time updates directly on you device, subscribe now.


ಕೊರಟಗೆರೆ: ಕೊರೊನಾ ಮತ್ತು ಪಾರ್ಶ್ವವಾಯು ರೋಗ ಬರೋದಿಲ್ಲ ಎಂಬ ಅನಾಮಿಕ ವ್ಯಕ್ತಿಯ ಮಾತಿನಿಂದ ಅರಣ್ಯದಲ್ಲಿ ವಾಸಿಸುತ್ತಿದ್ದ ಕರಡಿಯನ್ನು ಸೆರೆ ಹಿಡಿದು ಸಾಯಿಸಿ ದೇಹವನ್ನು ಬೆಟ್ಟದ ಮೇಲೆ ಕತ್ತರಿಸಿ ಮಾಂಸ ಸೇವಿಸಿರುವ ಘಟನೆ ಕೊರಟಗೆರೆ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಸಿದ್ದರಬೆಟ್ಟ ಗ್ರಾಪಂ ವ್ಯಾಪ್ತಿಯ ಗೌಜಗಲ್ಲು ಗ್ರಾಮದ ಚಿಕ್ಕಬಸವಯ್ಯಎಂಬುವರ ಮನೆಯ ಮೇಲೆ ಕೊರಟಗೆರೆ ಅರಣ್ಯಇಲಾಖೆಯ ವಲಯ ಅರಣ್ಯಾಧಿಕಾರಿ ಸುರೇಶ್ ನೇತೃತ್ವದ ತಂಡ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ವೇಳೆ 1 ಕೆಜಿ 50 ಗ್ರಾಂ ಕರಡಿಯ ಮಾಂಸ ಪತ್ತೆಯಾಗಿದೆ.
ಗೌಜಗಲ್ಲು ಗ್ರಾಮದ ಚಿಕ್ಕಬಸವಯ್ಯಎಂಬಾತನ ಮನೆಯಲ್ಲಿ ದೊರೆತ ಕರಡಿಯ ಮಾಂಸವನ್ನು ಬೆನ್ನತ್ತಿ ತನಿಖೆ ನಡೆಸಿದ ವೇಳೆ ಕೃತ್ಯ ಬಯಲಾಗಿದೆ. ಚನ್ನರಾಯನದುರ್ಗ, ಸೋಳೆಕಲ್ಲು, ಕೋಳಿಕಲ್ಲು ಅರಣ್ಯ ಪ್ರದೇಶದಿಂದ ರೈತರ ಜಮೀನಿಗೆ ಆಹಾರಕ್ಕಾಗಿ ಬಂದ ವೇಳೆ ಕರಡಿಯನ್ನು ಬೇಟೆ ಆಡಿದ್ದಾರೆ. ಗೌಜಗಲ್ಲು ಗ್ರಾಮದ ಸರ್ವೆ ನಂ.17ರ ಬಂಡೆಯಲ್ಲಿ ಕರಡಿಯ ದೇಹ ಮತ್ತು ಕೂದಲು ಪತ್ತೆಯಾಗಿದೆ.
ಗೌಜಗಲ್ಲು ಗ್ರಾಮದ ಬಂಡೆಯ ಮೇಲೆ ಆರು ಜನ ಆರೋಪಿಗಳು ಕರಡಿಯ ದೇಹವನ್ನು ಕತ್ತರಿಸಿ ಆರು ಗುಡ್ಡೆಗಳನ್ನಾಗಿ ಮಾಡಿ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಮನೆಯಲ್ಲಿ ಕರಡಿಯ ಮಾಂಸದ ಊಟ ಮಾಡಿದ ನಂತರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಪಿಗಳ ಆರೋಗ್ಯ ಪರೀಕ್ಷೆಯ ಜೊತೆ ಊಟದ ಪರೀಕ್ಷೆ ನಡೆಸಲಾಗಿದೆ.
ಸಿದ್ದರಬೆಟ್ಟ ಗ್ರಾಪಂ ವ್ಯಾಪ್ತಿಯ ಗೌಜಗಲ್ಲು ಗ್ರಾಮದ ಚಿಕ್ಕಬಸವಯ್ಯ, ಯತೀಶ್, ನಾಗರಾಜು, ಶ್ರೀಧರ, ರಾಮಯ್ಯ, ರಾಜಣ್ಣ ಎಂಬ ಆರು ಜನರನ್ನು ಬಂಧಿಸಿ ಕೊರಟಗೆರೆ ಅರಣ್ಯಇಲಾಖೆಯಲ್ಲಿ ವನ್ಯಜೀವಿ ಅಪರಾಧ ಕಾಯ್ದೆಯಡಿ ಪ್ರಕರಣ ದಾಖಲಿಸಿ 6 ಜನ ಆರೋಪಿಗಳನ್ನು ಕೊರಟಗೆರೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಕಾರ್ಯಾಚರಣೆಯಲ್ಲಿ ಮಧುಗಿರಿ ಅರಣ್ಯ ಉಪವಿಭಾಗ ಸಹಾಯಕ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನಪ್ಪ, ಕೊರಟಗೆರೆ ವಲಯ ಅರಣ್ಯಾಧಿಕಾರಿ ಸುರೇಶ್, ಉಪ ವಲಯ ಅರಣ್ಯಾಧಿಕಾರಿ ನಾಗರಾಜು, ಹನುಮಂತರಾಯಪ್ಪ, ಅರಣ್ಯರಕ್ಷಕರಾದ ಮಂಜುನಾಥ, ವೆಂಕಟರಾಮು, ನರಸಿಂಹಯ್ಯ, ಚಾಂದುಪಾಷ, ನರಸರಾಜು ಇದ್ದರು.

Get real time updates directly on you device, subscribe now.

Comments are closed.

error: Content is protected !!