ಬೆಂಗಳೂರು: ‘ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ಎಂಬ ನಾಡಗೀತೆಯ ಸಾಲುಗಳನ್ನು ಹೇಳುವ ಮೂಲಕ ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ, ಖ್ಯಾತ ನಟ ಪವನ್ ಕಲ್ಯಾಣ್ ಕನ್ನಡಾಭಿಮಾನ ತೋರಿಸಿದ್ದಾರೆ.
ವಿಧಾನಸೌಧ ಮುಂಭಾಗದ ಮೆಟ್ಟಿಲುಗಳ ಮೇಲೆ ಹಮ್ಮಿಕೊಂಡಿದ್ದ ಕುಮ್ಕಿ ಆನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ರಾಷ್ಟ್ರಕವಿ ಕುವೆಂಪು ಕವನದ ಬಗ್ಗೆಯೂ ಪ್ರಸ್ತಾಪಿಸಿದರು.ಅರಣ್ಯದ ಬಗ್ಗೆ ಕುವೆಂಪು ಅವರಿಗೆ ಮಮಕಾರವಿತ್ತು. ತಮ್ಮ ಕವನಗಳಲ್ಲಿ ಹೆಚ್ಚಿನ ಮಹತ್ವ ಕೊಟ್ಟಿದ್ದರು. ಅವರನ್ನು ನಾವು ನೆನೆಯಬೇಕಿದೆ. ಇವತ್ತು ವಿಧಾನಸೌಧದಲ್ಲಿ ನಾನು ನಿಂತಿದ್ದೇನೆ. ಒಂದು ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿದೆ ಎಂದು ಕನ್ನಡದಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದರು.
ಈಕ್ವಿಟಿ, ಎಕಾಲಜಿ, ಡೆವಲಪ್ ಮೆಂಟ್ ಸಿದ್ದರಾಮಯ್ಯನವರ ಸೂತ್ರಗಳು. ನಮ್ಮದು ಇದೇ ರೀತಿಯ ಸೂತ್ರಗಳಾಗಿವೆ. ಎರಡು ಡಿಫರೆಂಟ್ ರಾಜಕೀಯ ಗುಂಪುಗಳಾಗಿವೆ. ಒಂದು ಇಂಡಿಯಾ ಅಲೆಯನ್ಸ್, ಮತ್ತೊಂದು ಎನ್ ಡಿಎ. ಆದರೆ ಎಲ್ಲರ ಹಿತಾಸಕ್ತಿ ಸಮಾಜದ ಕಲ್ಯಾಣ. ಆ ನಿಟ್ಟಿನಲ್ಲೇ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿಯಾಗುತ್ತಿದೆ. ಕರ್ನಾಟಕ ಹಾಗೂ ಆಂಧ್ರ ಪ್ರದೇಶ ಸಹೋದರ ರಾಜ್ಯಗಳು. ವೈಲ್ಡ್ ಲೈಫ್ ನಲ್ಲಿ ಎರಡೂ ರಾಜ್ಯಗಳು ಪ್ರಬಲವಾಗಿವೆ. ಅರಣ್ಯ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹಿತಾಸಕ್ತಿ. ಕರ್ನಾಟಕ ನಮಗೆ ಕುಮ್ಕಿ ಆನೆಗಳನ್ನು ನೀಡುವ ಮೂಲಕ ಉದಾತ್ತ ಉಡುಗೊರೆ ಕೊಟ್ಟಿದೆ. ಅದಕ್ಕೆ ನಾವು ಧನ್ಯವಾದ ತಿಳಿಸುತ್ತೇವೆ. ಸಹಕಾರದಿಂದ ಎರಡು ರಾಜ್ಯದ ಅರಣ್ಯ ಸುರಕ್ಷಿತವಾಗಿವೆ. ಆಂಧ್ರದಲ್ಲೂ ಅನೆಗಳ ಸಂರಕ್ಷಣೆ ಮಾಡುತ್ತೇವೆ. ತರಬೇತಿ ಕ್ಯಾಂಪ್ ಗಳನ್ನು ಪ್ರಾರಂಭಿಸುತ್ತೇವೆ. ಇದಕ್ಕೆ ಕರ್ನಾಟಕದ ಸಹಕಾರ ಪಡೆಯುತ್ತೇವೆ ಎಂದು ತಿಳಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ನಮ್ಮ ಊರಲ್ಲಿ ಎಷ್ಟು ಆನೆಗಳಿವೆ ಎಂದು ಗೊತ್ತಿಲ್ಲ. ಅಷ್ಟೊಂದು ಆನೆಗಳು ನಮ್ಮಲ್ಲಿವೆ. ಸೋನಿಯಾ ಗಾಂಧಿ ಅವರನ್ನು ಕಬಿನಿಗೆ ಕರೆದೊಯ್ದಿದ್ದೆ. ಆಗ ಅಲ್ಲಿನ ವಾತಾವರಣ ನೋಡಿದ್ದೆ. ಮೊನ್ನೆಯೂ ನಾನು ಕಬಿನಿಗೆ ಹೋಗಿದ್ದೆ. ದೋಣಿ ವಿಹಾರಕ್ಕೆ ನನ್ನನ್ನು ಅಧಿಕಾರಿಗಳು ಕರೆದೊಯ್ದಿದ್ದರು. ಆಗ 150 ಆನೆಗಳನ್ನು ನಾನು ನೋಡಿದೆ. ಇಷ್ಟು ದೊಡ್ಡ ಹಿಂಡನ್ನು ನಾನು ಯಾವತ್ತೂ ನೋಡಿಲ್ಲ. ನಮ್ಮಲ್ಲಿ ದೊಡ್ಡ ಅರಣ್ಯ ಸಂಪತ್ತಿದೆ ಎಂದು ಹೇಳಿದರು.