
ಬೆಳಗಾವಿ: ಕೆಲ ಅನುಮಾನದ ಹಿನ್ನೆಲೆ ಪತ್ನಿಯನ್ನು ಪತಿಯೇ ಕೊಲೆ ಮಾಡಿರುವ ಘಟನೆ ಖಾನಾಪುರ ತಾಲೂಕಿನ ಕಾಪೋಲಿ ಗ್ರಾಮದಲ್ಲಿ ನಡೆದಿದೆ. ತಾಯಿ ಮಸಣ ಸೇರಿದರೆ, ತಂದೆ ಜೈಲು ಪಾಲಾಗಿದ್ದರಿಂದ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.
ಕಿರಣಾ ಅವಿನಾಶ ಬಾಳೇಕುಂದ್ರಿ (30) ಮೃತ ಮಹಿಳೆ. ಅವಿನಾಶ ಮಾರುತಿ ಬಾಳೇಕುಂದ್ರಿ (38) ಕೊಲೆ ಆರೋಪಿ.
ಕೊಲೆ ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಮಾಹಿತಿ ನೀಡಿದರು. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಮಾತನಾಡಿ, ’ಜಿಲ್ಲೆಯ ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕಾಪೋಲಿ ಗ್ರಾಮದಲ್ಲಿ ಸೋಮವಾರ ಕೊಲೆ ಆಗಿದೆ. ಕಿರಣಾ ಹಾಗೂ ಅವಿನಾಶ ದಂಪತಿಗಳ ನಡುವೆ ಅಸಮಾಧಾನ ಇತ್ತು, ಎರಡು ದಿನಗಳ ಹಿಂದೆ ಗಲಾಟೆ ಕೂಡಾ ನಡೆದಿತ್ತು. ಹೀಗಾಗಿ ಕಿರಣಾ ಅವರ ತಂದೆ ತಾಯಿ ಬಂದು ಸಮಾಧಾನ ಮಾಡಿ ಹೋಗಿದ್ದರು’ ಎಂದು ತಿಳಿಸಿದ್ದಾರೆ.
’ಹೀಗೆ ಸಮಾಧಾನ ಮಾಡಿ ಹೋದ ಮೇಲೂ ಅವಿನಾಶ ರಾತ್ರಿ 12 ಗಂಟೆ ಸಮಯದಲ್ಲಿ ಪತ್ನಿಗೆ ಕಟ್ಟಿಗೆಯಿಂದ ಹೊಡೆದಿದ್ದಾನೆ. ಹೀಗಾಗಿ, ಪತ್ನಿಗೆ ಆಂತರಿಕವಾಗಿ ಗಾಯವಾಗಿದೆ. ಅಲ್ಲದೇ, ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ನಂತರ ಬೈಲಹೊಂಗಲದಲ್ಲಿರುವ ಆಶೀರ್ವಾದ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಮುಂಜಾನೆ ಮೃತಪಟ್ಟಿರುವುದು ಕಂಡು ಬಂದಿರುತ್ತದೆ. ಅಲ್ಲಿಂದ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಹೇಳಿ ಮೃತದೇಹವನ್ನ ಗ್ರಾಮಕ್ಕೆ ತೆಗೆದುಕೊಂಡು ಬಂದಿರುತ್ತಾರೆ. ಆದರೆ, ಸ್ಥಳೀಯರೊಬ್ಬರು ಠಾಣೆಗೆ ಬಂದು ಇದು ಹೊಡೆದಾಟದಿಂದ ಕೊಲೆ ಆಗಿದೆ ಎಂದು ದೂರು ನೀಡಿದ್ದಾರೆ. ದೂರು ಸ್ವೀಕರಿಸಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಹೊಡೆದಿರುವುದರಿಂದಲೇ ಡೆತ್ ಆಗಿರುವುದು ಕಂಡುಬಂದಿರುತ್ತದೆ. ಅದಕ್ಕೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದೇವೆ. ತನಿಖೆ ಮುಂದುವರೆಸುತ್ತಿದ್ದೇವೆ. ಮೃತ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು’ ಎಂದು ಎಸ್ಪಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು.
ಮೃತದೇಹವನ್ನು ಬೆಳಗಾವಿ ಬಿಮ್ಸ್ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪ್ರಾಥಮಿಕ ವರದಿಯಲ್ಲಿಯೂ ಕೊಲೆ ಎಂಬುದು ದೃಢವಾಗಿದೆ. ವಿಚಾರಣೆ ವೇಳೆ ಪತ್ನಿಯನ್ನು ಕೊಲೆಗೈದ ಬಗ್ಗೆ ಅವಿನಾಶ್ ಕೂಡ ಒಪ್ಪಿಕೊಂಡಿದ್ದು, ಆರೋಪಿಯನ್ನು ಬಂಧಿಸಿ ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ’ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ಪತ್ನಿ ಕೊಂದ ಪತಿ : ಮದುವೆಯಾಗಿ ಮೂರು ವರ್ಷವಾದರೂ ಮಕ್ಕಳಾಗದ ಕಾರಣಕ್ಕೆ ಪ್ರತಿದಿನ ಜಗಳ ಮಾಡುತ್ತಿದ್ದ ಪತ್ನಿಯನ್ನು ಕೊಲೆ ಮಾಡಿ, ಬಳಿಕ ಹೃದಯಾಘಾತವೆಂದು ಕತೆ ಕಟ್ಟಿದ್ದ ಪತಿ ಈಗ ಜೈಲು ಸೇರಿದ್ದಾನೆ. ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ನೇಗಿನಹಾಳ ಗ್ರಾಮದ ರಾಜೇಶ್ವರಿ ಫಕೀರಪ್ಪ ಗಿಲಕ್ಕನವರ (21) ಕೊಲೆಯಾದ ದುರ್ದೈವಿ. ಫಕೀರಪ್ಪ ಬಸಪ್ಪ ಗಿಲಕ್ಕನವರ (28) ಕೊಲೆ ಆರೋಪಿ.



