ಬೆಂಗಳೂರು: ವಿಧಾನಸಭೆಯಲ್ಲಿ ಬುಧವಾರ ಗ್ಯಾಸ್ ಸಮಸ್ಯೆ ಕುರಿತು ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿ ಸದಸ್ಯರ ನಡುವೆ ಗದ್ದಲಕ್ಕೆ ಕಾರಣವಾಯಿತು.
ಸದನದಲ್ಲಿ ಶೂನ್ಯ ವೇಳೆಯಲ್ಲಿ ಶಾಸಕ ಕುಣಿಗಲ್ ರಂಗನಾಥ್ ಗ್ಯಾಸ್ ಪ್ರಾಬ್ಲಂ ಕುರಿತು ಪ್ರಸ್ತಾಪಿಸಿದರು. ರಾಜ್ಯದ ಹಲವೆಡೆ ಮತ್ತು ಬೆಂಗಳೂರಲ್ಲಿ ಗ್ಯಾಸ್ ಸಮಸ್ಯೆ ಇದೆ. ಬ್ಲಾಕ್ ಮಾರ್ಕೆಟ್ ಶುರುವಾಗಿದೆ. ಇದಕ್ಕೆ ಮೋದಿ ವಿದೇಶಾಂಗ ನೀತಿಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಯುದ್ಧದ ಸಂದರ್ಭದಲ್ಲಿ ರಾಜಕೀಯ ಏಕೆ ಮಾಡುತ್ತೀರೆಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ, ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರ ಜೋರಾಗಿ ನಡೆಯಿತು.
ಮೋದಿ ಅವರಿಗೆ ಟ್ರಂಪ್ ಬೆಸ್ಟ್ ಫ್ರೆಂಡ್. ನಿಮ್ಮ ವಿದೇಶಾಂಗ ನೀತಿ ಏನಾಯ್ತು? ನಿಮಗೆ ಯೋಗ್ಯತೆ ಇಲ್ಲ. ಎಸ್ಮಾ ಏಕೆ ಜಾರಿ ಮಾಡಿದ್ದೀರಾ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು. ಇದೇ ವೇಳೆ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಿ ಗರಂ ಆದರು. ಕೇಂದ್ರ ಸರ್ಕಾರ ಅಂದ ತಕ್ಷಣ ಎದ್ದು ನಿಂತುಕೊಂಡರೆ ಹೇಗೆ? ಗ್ಯಾಸ್ ಸಿಲಿಂಡರ್ ಸಪ್ಲೈ ಮಾಡೋರು ಕೇಂದ್ರ ಸರ್ಕಾರ ಅಲ್ಲವೇ ಎಂದು ಕಿಡಿಕಾರಿದರು.
ಆಗ ಬಿಜೆಪಿ ಶಾಸಕ ಸುನಿಲ್ ಕುಮಾರ್ ತಿರುಗೇಟು ನೀಡಿದರು. ಯುದ್ಧದ ಕಾರಣಕ್ಕೆ ಆಗಿರುವ ಸಮಸ್ಯೆ ಎಲ್ಲ ಕಡೆಗಳಲ್ಲೂ ಇದೇ ಸಮಸ್ಯೆ ಆಗಿದೆ. ನೀವು ಎಲ್ಲಾ ವಿಚಾರಕ್ಕೂ ರಾಜಕಾರಣ ಮಾಡಿದರೆ ಹೇಗೆ? ಈ ಸರ್ಕಾರಕ್ಕೆ ಯೋಗ್ಯತೆ ಇಲ್ಲ. ಸರ್ವರ್ ಸಮಸ್ಯೆ ಸರಿ ಮಾಡಿಲ್ಲ ಎಂದು ಕಿಡಿಕಾರಿದರು.
ಶಾಸಕ ಸುನಿಲ್ ಕುಮಾರ್ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ನಿಮಗೆ ಯೋಗ್ಯತೆ ಇಲ್ಲ, ಬೆಲೆ ಹೆಚ್ಚಳ ಮಾಡಿದವರು ನೀವು. ಎಸ್ಮಾ ಜಾರಿ ಮಾಡಿದವರು ಯಾರು? ಗ್ಯಾಸ್ ಸಮಸ್ಯೆಗೆ ಕೇಂದ್ರ ಸರ್ಕಾರವೇ ಜವಾಬ್ದಾರಿ ಎಂದು ಆಕ್ರೋಶ ಹೊರಹಾಕಿದರು.
ಇದಾದ ಬಳಿಕ ಅಶೋಕ್ ಮಾತನಾಡಿ, ಸಿಎಂ ಅವರೇ ಸ್ಟ್ರೈಕ್ ಮಾಡಿ ಅಂತಾ ಹೇಳುತ್ತಾರೆ. ಇದು ಸರೀನಾ ಎಂದು ವಾಗ್ದಾಳಿ ನಡೆಸಿದರು. ಆಗ ಸಿಎಂ ಸ್ಪಷ್ಟನೆ ನೀಡಿ ನಾನು ಸ್ಟ್ರೈಕ್ ಮಾಡಿ ಅಂತಾ ಹೇಳಿಲ್ಲ. ಆದರೆ ಹೋಟೆಲ್ ಮಾಲೀಕರು ಸ್ಟ್ರೈಕ್ ಮಾಡ್ತಾರೆ ಎಂದು ಕೇಳಿದಾಗ ಸರಿ ಇದೆ ಅಂದಿದ್ದೇನೆ. ಅವರು ಸ್ಟ್ರೈಕ್ ಮಾಡೋದು ಸರಿ ಇದೆ ಎಂದು ತಿರುಗೇಟು ನೀಡಿದರು.
ವಿಧಾನಸಭೆಯಲ್ಲಿ ‘ಗ್ಯಾಸ್ ವಾರ್’ ಆಡಳಿತ- ವಿಪಕ್ಷ ಸದಸ್ಯರ ನಡುವೆ ವಾಗ್ವಾದ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


