
ಗುಬ್ಬಿ: ತುಮಕೂರು ಕಡೆಯಿಂದ ಹೊಸದುರ್ಗ ಮಾರ್ಗವಾಗಿ ಚಲಿಸುತ್ತಿದ್ದ ಡಸ್ಟರ್ ಕಂಪನಿಯ ಕಾರಿನಲ್ಲಿ ಇದ್ದಕ್ಕಿದ್ದಂತೆ ಹೊಗೆ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಹೊತ್ತಿ ಉರಿದ ಘಟನೆ ಗುಬ್ಬಿ ತಾಲೂಕಿನ ಎಚ್ಎಎಲ್ ಘಟಕದ ಮುಂದಿನ ಯಲ್ಲಾಪುರ ಗೇಟ್ ಬಳಿ ನಡೆದಿದೆ.
ಕಾರು ಮಾಲೀಕ ಹೇಮಂತ್ ಮತ್ತು ಮತ್ತೊಬ್ಬ ತುಮಕೂರು ಕಡೆಯಿಂದ ತಮ್ಮ ಸ್ವಗ್ರಾಮ ಹೊಸದುರ್ಗ ಬಳಿಯ ಶ್ರೀರಾಮಪುರ ಎಂಬಲ್ಲಿಗೆ ತೆರಳುತ್ತಿದ್ದರು, ಮಾರ್ಗ ಮಧ್ಯೆ ಗುಬ್ಬಿಯ ಯಲ್ಲಾಪುರ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಡ್ರೈವರ್ ಸೇರಿದಂತೆ ಕಾರು ಮಾಲೀಕ ಕೆಳಗಿಳಿದಿದ್ದಾರೆ, ನೋಡು ನೋಡುತ್ತಲೇ ಡಸ್ಟರ್ ಕಾರ್ ರಸ್ತೆ ಮಧ್ಯದಲ್ಲಿ ಧಗಧಗನೆ ಹೊತ್ತಿ ಉರಿದಿದೆ, ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಮತ್ತು ಗುಬ್ಬಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಭೇಟಿ ನೀಡಿ ಬೆಂಕಿ ನಂದಿಸುವ ಕೆಲಸಕ್ಕೆ ಮುಂದಾಗಿದ್ದು, ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷಣಾರ್ಧದಲ್ಲಿ ಹೊತ್ತಿ ಉರಿದ ಕಾರು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


