
ಕುಣಿಗಲ್: ಚಿಕಿತ್ಸೆಗೆಂದು ಪಟ್ಟಣದ ಖಾಸಗಿ ಆಸ್ಪತ್ರೆಗೆ ಬಂದ ಮಹಿಳೆ ಚಿಕಿತ್ಸೆ ಪಡೆದ ನಂತರ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸವಾಗಿ ಹೆಚ್ಚಿನ ಚಿಕಿತ್ಸೆಗೆ ಚುಂಚನಗಿರಿ ಆಸ್ಪತ್ರೆಗೆ ಸಾಗಿಸಿದಾಗ ಅಲ್ಲಿ ಮೃತಪಟ್ಟಿದ್ದು ಮಹಿಳೆಗೆ ಸಾವಿಗೆ ಖಾಸಗಿ ಆಸ್ಪತ್ರೆಯವರೆ ಕಾರಣ ಎಂದು ಕುಟುಂಬದವರು ಆರೋಪಿಸಿ ದೂರು ನೀಡಿದ್ದು ಪೊಲೀಸರು ಅನುಮಾನಾಸ್ಪದ ಸಾವಿನ ಘಟನೆ ಎಂದು ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ.
ಪಟ್ಟಣದ ದೊಡ್ಡಪೇಟೆ ವಾಸಿ ಪಾರ್ವತಮ್ಮ( 50) ಚಿಕಿತ್ಸೆಗೆಂದು ಮಂಗಳವಾರ ಸಂಜೆ ಪಟ್ಟಣದ ಖಾಸಗಿ ಆಸ್ಪತ್ರೆಗೆ ಆಗಮಿಸಿದಾಗ, ತಪಾಸಣೆ ನಡೆಸಿದ ವೈದ್ಯರು ಚುಚ್ಚುಮದ್ದು ನೀಡಿದ್ದರು. ಚುಚ್ಚುಮದ್ದು ನೀಡಿದ ಕೆಲವೇ ಹೊತ್ತಿನಲ್ಲಿ ಆಕೆ ಆರೋಗ್ಯದಲ್ಲಿ ತೀವ್ರ ವ್ಯತ್ಯಯವಾಯಿತು.
ಹೆಚ್ಚಿನ ಚಿಕಿತ್ಸೆಗೆ ಬೆಳ್ಳೂರ್ ಕ್ರಾಸ್ ಸಮೀಪದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗಿದೆ ಮಹಿಳೆ ಮೃತಪಟ್ಟಿದ್ದಾರೆ. ಮಹಿಳೆಯ ಸಾವಿಗೆ ಖಾಸಗಿ ಆಸ್ಪತ್ರೆಯ ವೈದ್ಯರು ನೀಡಿದ ಚುಚ್ಚುಮದ್ದೆ ಕಾರಣ ಎಂದು ಆರೋಪಿಸಿ ಮೃತರ ಸಂಬಂಧಿಕರು ಖಾಸಗಿ ಆಸ್ಪತ್ರೆ ವೈದ್ಯರ ಮೇಲೆ ಕೊಲೆ ಪ್ರಕರಣ ದಾಖಲಿಸುವಂತೆ ಬುಧವಾರ ದೂರು ನೀಡಿದ್ದರು, ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣ ಎಂದು ಬುಧವಾರ ರಾತ್ರಿ ದೂರು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಹಿಳೆ ಸಾವು- ಪ್ರಕರಣ ದಾಖಲು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


