
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುವಾಗ ಶಾಸಕರಿಗೆ ಕನಿಷ್ಠ 4ರಿಂದ 5 ಟಿಕೆಟ್ ಕೊಡಿಸಿ ಎಂದು ವಿಧಾನಸಭೆಯಲ್ಲಿ ಸೋಮವಾರ ಸದಸ್ಯರು ಪಕ್ಷಾತೀತವಾಗಿ ಆಗ್ರಹಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣ ಸಂಬಂಧ ನಡೆದ ಚರ್ಚೆ ವೇಳೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಮೊನ್ನೆ 11 ಜನ ಕಾಲ್ತುಳಿತದಲ್ಲಿ ಸತ್ತಿದ್ದಾರೆ. ಮತ್ತೊಂದು ಸ್ಟೇಡಿಯಂ ಬೇಡ. ಚಿನ್ನಸ್ವಾಮಿ ಸ್ಟೇಡಿಯಂ ಜಾಗ ನಮ್ಮದು. ಅಲ್ಲಿ ಕ್ರಿಕೆಟ್ ಟ್ರೈನಿಂಗ್ ಮಾಡಿ ಎಂದು ಜಾಗ ನೀಡಿದ್ದೇವೆ. ಅವರು ಏನು ತರಬೇತಿ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಒಂದು ಟಿಕೆಟ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಮುಂದೆ ಅಂಗಲಾಚುವ ಪರಿಸ್ಥಿತಿ ಇದೆ. ನಮ್ಮ ಹೆಸರಿನಲ್ಲಿರುವ ಟಿಕೆಟ್ಗಳನ್ನು ಮಾರಿಕೊಳ್ಳುತ್ತಾರೆ ಎಂದು ಅಶೋಕ್ ಆರೋಪಿಸಿದರು.
ಈ ವೇಳೆ ಮಾತಾಡಿದ ಕೈ ಶಾಸಕ ವಿಜಯಾನಂದ ಕಾಶಪ್ಪನವರ್, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವೀಕ್ಷಕರ ಸಂಖ್ಯೆಯನ್ನು ಏರಿಸಿ. ಶಾಸಕರಿಗೆ ಒಂದೇ ಟಿಕೆಟ್ ಅದೂ ಕೆಳಗಡೆ ಗ್ಯಾಲರಿಯಲ್ಲಿ ಕೊಡುತ್ತಾರೆ. ಶಾಸಕರಿಗೆ ಕೂರಲು ಮೊದಲು ಸೂಕ್ತ ಅವಕಾಶ ಮಾಡಿಕೊಡಲಿ. ಹೊಸ ಸ್ಟೇಡಿಯಂ ಆಮೇಲೆ ಮಾಡಿ ಎಂದು ಆಗ್ರಹಿಸಿದರು.



