
*2025-26ನೇ ಸಾಲಿನಲ್ಲಿ 2,016 ಕೋಟಿ ರೂ. ಐತಿಹಾಸಿಕ ವಹಿವಾಟು
ಬೆಂಗಳೂರು: 110 ವರ್ಷಗಳ ಇತಿಹಾಸವಿರುವ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಮೈಸೂರು ಸ್ಯಾಂಡಲ್) 2025-26ನೇ ವರ್ಷದಲ್ಲಿ ಮೊದಲ ಬಾರಿಗೆ 2,016 ಕೋಟಿ ರೂ. ವಹಿವಾಟು ನಡೆಸಿ 507 ಕೋಟಿ ರೂ. ಲಾಭ ಗಳಿಸಿದೆ.
ಮೈಸೂರು ಸ್ಯಾಂಡಲ್ ಸಂಸ್ಥೆಯ ಪಾಲಿಗೆ ಇದು ಚಾರಿತ್ರಿಕ ಮೈಲುಗಲ್ಲು. ಸಾರ್ವಜನಿಕ ಉದ್ದಿಮೆಗಳ ಸಾಧನೆಯಲ್ಲಿ ಕಿರೀಟಪ್ರಾಯವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಸಂಸ್ಥೆಯ ಅಪೂರ್ವ ಸಾಧನೆಯ ಹಿನ್ನೆಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮೈಸೂರು ಸ್ಯಾಂಡೆಲ್ ಸಾಧನೆಯ ಶಿಖರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಂಸ್ಥೆಯು ಮೊದಲ ಒಂದು ಸಾವಿರ ಕೋಟಿ ರೂ.ಗಳ ವಹಿವಾಟನ್ನು ತಲುಪಲು 105 ವರ್ಷ ತೆಗೆದುಕೊಂಡಿತ್ತು. ಆದರೆ, ಅಲ್ಲಿಂದ 2 ಸಾವಿರ ಕೋಟಿ ರೂ. ವಹಿವಾಟನ್ನು ಕೇವಲ ನಾಲ್ಕು ವರ್ಷಗಳಲ್ಲಿ ತಲುಪಿದೆ. ಅದರಲ್ಲೂ 2022-23 ರಲ್ಲಿ 1,375 ಕೋಟಿ ರೂ. ವಹಿವಾಟು ನಡೆಸಿದ್ದ ಸಂಸ್ಥೆಯು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕಳೆದ ಮೂರು ವರ್ಷಗಳಲ್ಲಿ 2,016 ಕೋಟಿ ರೂ. ತಲುಪಿದೆ. ಇಷ್ಟು ಅಲ್ಪಾವಧಿಯಲ್ಲಿ ಕೆ.ಎಸ್.ಡಿ.ಎಲ್ ವಹಿವಾಟು 641 ಕೋಟಿ ರೂ.ಗಳನ್ನು ಹೆಚ್ಚಳ ಕಂಡಿದೆ ಎಂದು ಶ್ಲಾಘಿಸಿದರು.
ಮೊದಲು ಸಂಸ್ಥೆಯು ಕೇವಲ 34 ಉತ್ಪನ್ನಗಳನ್ನು ಹೊಂದಿತ್ತು. ಮೂರು ವರ್ಷಗಳಲ್ಲಿ ನಾವು 57 ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ಈಗ ಒಟ್ಟು 94 ಉತ್ಪನ್ನಗಳಿವೆ. ಯಾವುದೇ ಹೊಸ ನೇಮಕಾತಿ ಇಲ್ಲದೆ, ಯಂತ್ರೋಪಕರಣಗಳ ಖರೀದಿ ಇಲ್ಲದೆ ಇದನ್ನೆಲ್ಲ ಸಾಧಿಸಲಾಗಿದೆ. ಬಂದಿರುವ 507 ಕೋಟಿ ರೂ. ಲಾಭದಲ್ಲಿ ಸರಕಾರಕ್ಕೆ 157 ಕೋಟಿ ರೂ. ಲಾಭಾಂಶ (ಡಿವಿಡೆಂಡ್) ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಕೋಟಿ ರೂ. ಹಸ್ತಾಂತರಿಸಲಾಗುವುದು. ಹೋದ ವರ್ಷ 135 ಕೋಟಿ ರೂ. ಕೊಡಲಾಗಿತ್ತು. ಇದರಲ್ಲಿ ಈಗ 22 ಕೋಟಿ ರೂ. ಹೆಚ್ಚಳವಾಗಿದೆ ಎಂದು ಅವರು ವಿವರಿಸಿದರು.
ಸಂಸ್ಥೆಯ ಅಧ್ಯಕ್ಷ ಸಿ ಎಸ್ ಅಪ್ಪಾಜಿ ನಾಡಗೌಡ ಮಾತನಾಡಿ, ಆಸ್ಟ್ರೇಲಿಯಾ ಸೇರಿದಂತೆ ದೇಶ ವಿದೇಶಗಳಿಗೆ ಹೋಗಿ ಸಾಬೂನು ಮಾರಾಟ ವಿಸ್ತರಣೆಗೆ ಪ್ರಯತ್ನ ಮಾಡಿದ್ದೇವೆ. ಆಧುನಿಕ ಮಾರಾಟ ವ್ಯವಸ್ಥೆ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿದ್ದು ಇವತ್ತಿನ ಸಾಧನೆಗೆ ಕಾರಣವಾಯಿತು ಎಂದು ಹೇಳಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪಿಕೆಎಂ ಪ್ರಶಾಂತ್ ಮಾತಮಾಡಿ, ಸಂಸ್ಥೆಯ ನೌಕರರಿಗೆ 4.83 ಕೋಟಿ ರೂಪಾಯಿಯನ್ನು ವೇತನ ಒಪ್ಪಂದದ ಮೂಲಕ ನೀಡಲಾಗಿದೆ. 20 ಕೋಟಿ ರೂಪಾಯಿ ಕ್ಯಾಂಪಸ್ ಸಂರಕ್ಷಣೆ ವಿನಿಯೋಗಿಸಲಾಗಿದೆ ಎಂದು ತಿಳಿಸಿದರು.






