ಕೊಡಿಗೇನಹಳ್ಳಿ: ಗಡಿಭಾಗದ ಮಳೆಯಾಶ್ರಿತರ ಪ್ರದೇಶದ ರೈತರು ತನ್ನ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿರುವಾಗ ಆರು ತಿಂಗಳಿಗೊಮ್ಮೆ ಬೋರ್ ವೆಲ್ ಕೇಬಲ್ ಕಳ್ಳರ ಹಾವಳಿಯಿಂದ ಬೆಳೆ ಉಳಿಸಿಕೊಳ್ಳಲು ಪರದಾಡಿತ್ತಿದ್ದು ಕೇಬಲ್ ಕಳ್ಳರು ರೈತರಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿದ್ದಾರೆ.
ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಅಣ್ಣೇನಹಳ್ಳಿ ಗ್ರಾಮದ ಹೊರ ಹೊಲಯದಲ್ಲಿ ಶುಕ್ರವಾರದ ರಾತ್ರಿ ಒಂದೆ ದಿನ ಅಣ್ಣೆನಹಳ್ಳಿಯ 20 ರೈತರ ಸರ್ವೆ ನಂ. 7/6, 7/2, 32, 8/5, 7/3, 6/1, 56, 163, 83, 22 ವ್ಯಾಪ್ತಿಯಲ್ಲಿ ಬೋರ್ ವೆಲ್ ಗಳಿಂದ ಸುಮಾರು 1 ಸಾವಿರ ಮೀಟರ್ 3 ಫೇಸ್ ಕೇಬಲ್ ಕಳುವಾಗಿದೆ, ಬಹುತೇಕ ಈ ಭಾಗದ ರೈತರು ರಾಗಿ, ಬಾಳೆ, ಮುಸುಕಿನ ಜೋಳ ಸೇರಿದಂತೆ ಜಾನುವಾರುಗಳಿಗೆ ಸಪ್ಪೆ ಬೆಳೆದಿದ್ದು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ರೈತ ಚೇತನ್ ರೆಡ್ಡಿ ಮಾತನಾಡಿ ಈ ಹಿಂದೆ ವರ್ಷಕ್ಕೆ ಎರಡು ಬಾರಿ ಸ್ಟಾರ್ಟರ್ ಕಳವು ಮಾಡಲಾಗುತಿತ್ತು, ಎರಡು ಮೂರು ಬಾರಿ ದೂರು ನೀಡಿದ್ದರೂ ಯಾವುದೆ ಪ್ರಯೋಜನವಾಗಿರಲಿಲ್ಲ, ಇದೀಗ ಒಂದೇ ದಿನ 20 ರೈತರ ಬೋರ್ ವೆಲ್ ಕೇಬಲ್ ಕಳವಾಗಿದೆ, ಇನ್ನಾದರೂ ಪೊಲೀಸ್ ಇಲಾಖೆ ಕಳ್ಳರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರೈತ ರಾಮರೆಡ್ಡಿ ಮಾತನಾಡಿ ನನ್ನ ಸರ್ವೆ ನಂ.7/3ರಲ್ಲಿ ಕರೆಂಟ್ ರೂಂ ಬಾಗಿಲು ಮುರಿದು ಸುಮಾರು 100 ಮೀಟರ್ ಕೇಬಲ್ ಕಳವು ಮಾಡಲಾಗಿದೆ, ಬೆಳೆ ಹಾಲು ಕಟ್ಟುತ್ತಿದ್ದು ಇದೀಗ ಬಾಡುತ್ತಿದೆ, ಸಾಲಸೋಲ ಮಡಿ ಬೆಳೆ ಇಟ್ಟರೆ ಇಂತಹ ಕಿಡಿಗೇಡಿಗಳ ಹಾವಳಿಯಿಂದ ಬೇಸತ್ತಿದ್ದೇವೆ, ಇದೀಗಾ ಕನಿಷ್ಠ ಒಬ್ಬ ರೈತನಿಗೆ 25 ಸಾವಿರ ಬೇಕು, ಎಲ್ಲಿಂದ ತರೋಣ ಎಂದು ಕಣ್ಣಿರಿಟ್ಟಿದ್ದಾರೆ.
ಮದ್ಯದ ಅಂಗಡಿಗಳಿಲ್ಲ ಬ್ರೇಕ್
ಹೋಬಳಿಯ ಆಂಧ್ರ ಮತ್ತು ಕರ್ನಾಟಕ ಗಡಿಯಲ್ಲಿ ಪ್ರಭಾವಿಗಳ ಬಾರ್ ಮತ್ತು ರೆಸ್ಟೋರೆಂಟ್ ಗಳು ನಾಯಿ ಕೊಡೆಗಳಂತೆ ತಲೆ ಎತ್ತಿವೆ. ಇಲ್ಲಿನ ಮದ್ಯ ಖರೀದಿಸಿ ರೈತರ ಜಮೀನಿನಲ್ಲಿ ಮದ್ಯಪಾನ ಮಾಡುತಿದ್ದು ಪ್ರಶ್ನಿಸುವ ರೈತರಿಗೆ ಬೆದರಿಸುತಿದ್ದಾರೆ, ರೈತರು ನಿತ್ಯ ತನ್ನ ಬೆಳೆ ಉಳಿಸಿಕೊಳ್ಳುವ ಜತೆಗೆ ತನ್ನ ಜಮೀನುಗಳಲ್ಲಿ ಬಾಟಲಿ ಹಾಗೂ ಪ್ಲಾಸ್ಟಿಕ್ ತೆರವು ಮಾಡಬೇಕಿದೆ, ಇದರ ಜೊತೆಗೆ ಕಳ್ಳತನ ಪ್ರಕರಣ ಹೆಚ್ಚಾಗಿವೆ ಎಂದು ಇಲ್ಲಿನ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಭಾಗದಲ್ಲಿ ಬಿಸಿಲಿಗೆ ಬೋರ್ ವೆಲ್ ಗಳಲ್ಲಿ ನೀರಿನ ಮಟ್ಟ ಕುಸಿದಿದೆ, ರೈತರು ಸಂಕಷ್ಟದಿಂದ ಬೆಳೆ ಪಡೆಯುವ ಸ್ಥಿತಿಯಲ್ಲಿ ಕೇಬಲ್ ಕಳ್ಳರು ರೈತರಿಗೆ ಸಿಂಹ ಸ್ವಪ್ನರಾಗಿದ್ದಾರೆ, ಈ ಹಿಂದೆ ಪ್ಯಾನಲ್ ಬೊರ್ಡ್ ಕಳವಾಗಿತ್ತು, ದೂರು ಕೊಟ್ಟಿದ್ದರೂ ಯಾವುದೆ ಪ್ರಯೋಜನವಾಗಿರಲಿಲ್ಲ, ಇನ್ನಾದರೂ ಶಾಸಕರು ಕೂಡಲೇ ಪೊಲೀಸರಿಗೆ ತುರ್ತಾಗಿ ಬಲೆ ಬೀಸಿ ಕಳ್ಳರನ್ನು ಹಿಡಿಯುವಂತೆ ಸೂಚನೆ ನೀಡಿ ರೈತರಿಗೆ ನ್ಯಾಯ ಒದಗಿಸಬೇಕು, ರೈತರಿಗೆ ನ್ಯಾಯ ಸಿಗದಿದ್ದರೆ ಠಾಣೆಯ ಮುಂಭಾಗ ಪ್ರತಿಭಟನೆ ಮಾಡಲಾಗುವುದು.
-ಗೋಪಾಲ್, ಸಾಮಾಜಿಕ ರ್ಕಾಯಕರ್ತ, ರೈತ.






