
ರಾಮನಗರ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸುಳ್ಳು ಹೇಳುವುದರಲ್ಲಿ ಡಾಕ್ಟರೇಟ್ ಕೊಡಬೇಕು. ಎರಡು ಬಾರಿ ಸಿಎಂ ಆದರೂ ಬುದ್ಧಿ ಕಲಿಯದ ಅವರು, ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಕಿಡಿಕಾರಿದರು.
ಶೃಂಗೇರಿ ಮರು ಅಂಚೆ ಮತ ಎಣಿಕೆಯಲ್ಲಿ ಮತ ಡಕಾಯಿತಿ ಆಗಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ನಗರದಲ್ಲಿ ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಶೃಂಗೇರಿ ಕ್ಷೇತ್ರದಲ್ಲಿ ಕೋರ್ಟ್ ಆದೇಶದಂತೆ ಮರು ಎಣಿಕೆಯಾಗಿದೆ. ಹೀಗಿರುವಾಗ ಕ್ಷೇತ್ರದಲ್ಲಿ ಮತ ಡಕಾಯಿತಿ ಎಂದು ಬಾಯಿಗೆ ಬಂದAತೆ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇವಿಎಂ ಬದಲು ಬ್ಯಾಲೆಟ್ ಪೇಪರ್ ಬೇಕು ಎನ್ನುವ ಕಾಂಗ್ರೆಸ್ನವರಿಗೆ ದಾವಣಗೆರೆ ಮತ್ತು ಬಾಗಲಕೋಟೆ ಉಪ ಚುನಾವಣೆಯಲ್ಲಿ ಇವಿಎಂ ಬೇಕಾಯ್ತಾ? ಸಿ.ಎಂ.ಗೆ ಸಮಯಕ್ಕೆ ತಕ್ಕಂತೆ ಸುಳ್ಳು ಹೇಳಿ ಅಭ್ಯಾಸ ಎಂದು ವ್ಯಂಗ್ಯವಾಡಿದರು.
ಖರ್ಗೆ ವಿರುದ್ಧ ಕಿಡಿ: ಸಚಿವ ಪ್ರಿಯಾಂಕ್ ಖರ್ಗೆ ಅವರು ಕೈಲಾಗದವನು ಮೈ ಪರಚಿಕೊಂಡ ಎಂಬAತೆ ಮಾತನಾಡುತ್ತಾರೆ. ಕೇರಳದಲ್ಲಿ ಅವರ ಪಕ್ಷ ಗೆದ್ದು ಬೀಗುತ್ತಿದೆಯಲ್ಲಾ, ಅಲ್ಲಿ ಎಲ್ಲವೂ ಸರಿ ಇದೆಯೇ? ಅವರು ಗೆದ್ದಾಗ ಮಾತ್ರ ಸರಿ. ಇಲ್ಲದಿದ್ದರೆ, ನಮ್ಮ ಮೇಲೆ ಗೂಬೆ ಕೂರಿಸುತ್ತಾರೆ ಎಂದು ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಗೆಲುವು ಚುನಾವಣಾ ಆಯೋಗದ ಗೆಲುವು ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಕಿಡಿಕಾರಿದರು.
ಖರ್ಗೆ ಅವರು ಜಾಣ ಕುರುಡರಂತೆ ಮಾತನಾಡಬಾರದು. ಮಹಿಳಾ ಮೀಸಲಾತಿ ತಿರಸ್ಕಾರ ಮಾಡಿದ ಪರಿಣಾಮ ಮಹಿಳೆಯರು ಅವರಿಗೆ ಗೂಸಾ ಕೊಟ್ಟಿದ್ದಾರೆ ಎಂದು ಹೇಳಿದರು.
ಸಮಯಕ್ಕೆ ತಕ್ಕಂತೆ ಸಿಎಂ ಸುಳ್ಳು: ವಿ.ಸೋಮಣ್ಣ ಕಿಡಿ







