ಕುಣಿಗಲ್: ತಾಲೂಕಿನ ಯಲಿಯೂರು ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಎತ್ತುವಳಿ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಕುಣಿಗಲ್ ಪೊಲೀಸರು ಸೋಮವಾರ ದಾಳಿ ನಡೆಸಿ, ಯಾವುದೇ ಅನುಮತಿ ಇಲ್ಲದೆ ಮಣ್ಣು ಎತ್ತುವಳಿ ಮಾಡುತ್ತಿದ್ದ ನಾಲ್ಕು ಜೆಸಿಬಿ ಹಾಗೂ 15ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳನ್ನು ವಶಕ್ಕೆ ಪಡೆದು ಕ್ರಮ ಕೈಗೊಂಡರು.
ಪೊಲೀಸರ ಕ್ರಮವನ್ನು ಖಂಡಿಸಿದ ಮುಖಂಡರಾದ ಶಿವಣ್ಣ, ಶಿವರಾಜು ಹಾಗೂ ಇತರರು, ರೈತರು ತಮ್ಮ ಜಮೀನುಗಳಿಗೆ ಮಣ್ಣು ತೆಗೆದುಕೊಂಡು ಹೋಗುವುದಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಠಾಣೆ ಎದುರು ಪ್ರತಿ‘ಟನೆ ನಡೆಸಿದ ಅವರು, ವಶಕ್ಕೆ ಪಡೆದ ವಾಹನಗಳನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ಈ ನಡುವೆ ಕೆಲವರು ಕೆರೆಯ ಮಣ್ಣನ್ನು ಅಕ್ರಮವಾಗಿ ಎತ್ತುವಳಿ ಮಾಡಿ ಮಾರಾಟ ಮಾಡುವ ಜಾಲ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು. ಮತ್ತೊಂದೆಡೆ, ಟ್ರ್ಯಾಕ್ಟರ್ ಹಾಗೂ ಜೆಸಿಬಿ ಬಳಸಿ ಮಣ್ಣು ಸಾಗಿಸುತ್ತಿದ್ದವರು, ನಾವು ರೈತರು, ನಮ್ಮ ಜಮೀನಿಗೆ ಮಣ್ಣು ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ವಾದಿಸಿದರು.
ಈ ಸಂಬಂಧ ಪೊಲೀಸರು ಅಕ್ರಮ ಮಣ್ಣು ಎತ್ತುವಳಿ ಪ್ರಕರಣದಲ್ಲಿ ವಾಹನಗಳಿಗೆ ದಂಡ ವಿಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ. ಕೆರೆಯಿಂದ ಮಣ್ಣು ಎತ್ತುವಳಿ ಮಾಡಲು ಸಂಬಂಧಿತ ಇಲಾಖೆಯಿಂದ ಅಗತ್ಯ ಅನುಮತಿ ಪಡೆದು, ನಿಯಮಾನುಸಾರ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ.








