ಗುಬ್ಬಿ: ಗುಬ್ಬಿ ತಾಲ್ಲೂಕು ನಿಟ್ಟೂರಿನ ಮೈಸೂರು ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಅತೀ ವೇಗವಾಗಿ ಬಂದ ಎಲೆಕ್ಟ್ರಿಕ್ ಕಾರು ರಸ್ತೆಯ ಪಕ್ಕದಲ್ಲಿ ಸೈಕಲ್‌ನಲ್ಲಿ ಸಾಗುತ್ತಿದ್ದ ಬಾಲಕ ಶೋಬಿತ್ ರಾಘವ್ (12) ಮೇಲೆ ಹರಿದು ತೀವ್ರವಾಗಿ ಗಾಯ ಗೊಂಡಿದ್ದು, ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ.
ಹಬ್ಬದ ಸಡಗರದಲ್ಲಿ ಇದ್ದ ಕುಟುಂಬದವರಿಗೆ ಈ ಆಕಸ್ಮಿಕ ಸಾವು ಆಘಾತ ಉಂಟು ಮಾಡಿದೆ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಅಪಘಾತಕ್ಕೆ ಕಾರಣವಾದ ಚಾಲಕ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದು ಪೊಲೀಸರು ತನಿಖೆ ನಡೆಸಿ ಅಪಘಾತಕ್ಕೆ ಕಾರಣವಾದ ಚಾಲಕನನ್ನು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.
ಅಪಘಾತಕ್ಕೆ ಕಾರಣವಾಗಿರುವ ವಾಹನ ಚಾಲಕನ ಮೇಲೆ ಕ್ರಮ ಕೈಗೊಳ್ಳಬೇಕು, ಪೊಲೀಸರು ನಿಷ್ಪಕ್ಷಪಾತವಾಗಿ ಪ್ರಕರಣದ ತನಿಖೆ ನಡೆಸಿ ಮೃತ ಬಾಲಕನ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಶಾಲೆಯ ರಜೆಯಲ್ಲಿದ್ದಂತಹ ಹಾಗೂ ಹಬ್ಬದ ಸಂರಮದಲ್ಲಿದ್ದ ಪುಟ್ಟ ಬಾಲಕನ ಸಾವು ಇಡೀ ನಿಟ್ಟೂರನ್ನೇ ಸ್ತಬ್ಧವಾಗಿಸಿದೆ.








