
ಬೆಳಗಾವಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಭೇಟಿಯಲ್ಲಿ ಯಾವುದೇ ರಾಜಕೀಯ ವಿಶೇಷತೆ ಇಲ್ಲ. ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.
ನಗರದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಸಂಘಟನೆ ಮತ್ತು ಸರ್ಕಾರದ ಕೆಲಸಗಳ ಬಗ್ಗೆ ಚರ್ಚಿಸಲು ಭೇಟಿಯಾಗುವುದು ಸಹಜ. ಚುನಾವಣೆ ಸಂದರ್ಭದಲ್ಲಿ ಅಥವಾ ಪಕ್ಷದ ಸಂಘಟನೆ ದೃಷ್ಟಿಯಿಂದ ಅಲ್ಪಸಂಖ್ಯಾತ ಮುಖಂಡರನ್ನು ಪಕ್ಷದಿಂದ ದೂರವಿಟ್ಟಿದ್ದು ಅಥವಾ ಹೊರಹಾಕಿದ್ದು ಸರಿಯಲ್ಲ ಎಂದು ನನ್ನ ಅಭಿಪ್ರಾಯ ತಿಳಿಸಿದ್ದೇನೆ ಎಂದರು.
ಈ ವಿಷಯದ ಕುರಿತು ಸುದೀರ್ಘವಾಗಿ ಚರ್ಚಿಸಿದ್ದು, ನಡೆದಿರುವ ಲೋಪದೋಷಗಳನ್ನು ಗಮನಿಸಿದ್ದೇನೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸುವುದಾಗಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ ಎಂದು ಸತೀಶ ತಿಳಿಸಿದರು.
ಪಕ್ಷವು ಎಲ್ಲ ಸಮುದಾಯಗಳನ್ನು ಒಳಗೊಂಡು ಹೋಗಬೇಕಾದ ಅಗತ್ಯವಿದೆ. ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಭದ್ರ ಬುನಾದಿಯಾಗಿದೆ. ಅವರಿಗೆ ಸೂಕ್ತ ಪ್ರಾತಿನಿಧ್ಯ ಮತ್ತು ನ್ಯಾಯ ಸಿಗಬೇಕು ಎಂಬುದು ನಮ್ಮ ನಿಲುವು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಡಿಕೆಶಿ ಜೊತೆ ರಾಜಕೀಯ ಚರ್ಚೆ ಮಾಡಿಲ್ಲ: ಜಾರಕಿಹೊಳಿ







