ಗುಬ್ಬಿ: ತಾಲೂಕಿನ ಎಂ.ಎಚ್.ಪಟ್ಟಣ ಗೇಟ್ ಬಳಿ ಬಳಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಕೆ ಎಸ್ ಆರ್‌ಟಿ ಸಿ ಬಸ್ ಪಲ್ಟಿಯಾಗಿ ಭಾರಿ ದುರಂತ ತಪ್ಪಿದೆ, ಬಸ್ ನಲ್ಲಿ ಭರ್ತಿಯಾಗಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಎಲ್ಲರೂ ಪಾರಾಗಿದ್ದಾರೆ.
ತಿಪಟೂರು ಡಿಪೋಗೆ ಸೇರಿದ ಈ ಸರ್ಕಾರಿ ಬಸ್ ಹೊಸದುರ್ಗದಿಂದ ಬೆಂಗಳೂರಿನ ಕಡೆಗೆ ತೆರಳುತ್ತಿತ್ತು, ಗುಬ್ಬಿ ಸಮೀಪದ ಎಂ.ಎಚ್.ಪಟ್ಟಣ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದಿಯ ಡಿವೈಡರ್ ಗೆ ಬಲವಾಗಿ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಡಿಕ್ಕಿಯ ರಭಸಕ್ಕೆ ಬಸ್ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.
ಐದಾರು ಪ್ರಯಾಣಿಕರಿಗೆ ಗಂಭೀರ ಗಾಯವಾಗಿದ್ದು ಮಿಕ್ಕವರು ಸೇಫ್ ಆಗಿದ್ದಾರೆ. ಅಪಘಾತದಲ್ಲಿ ಗಂಭೀರ ಗಾಯಗಳಾದವರನ್ನು ತಕ್ಷಣವೇ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ, ಉಳಿದ 40ಕ್ಕೂ ಹೆಚ್ಚು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಅಪಘಾತದಿಂದ ರಸ್ತೆ ಸಂಚಾರಕ್ಕೆ ಸ್ವಲ್ಪ ಸಮಯ ಅಡಚಣೆಯಾಗಿದ್ದು, ಪೊಲೀಸ್ ಮತ್ತು ರಸ್ತೆ ಸಾರಿಗೆ ಅಧಿಕಾರಿಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದರ ನಡುವೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುಂಟುತ್ತಲೆ ಸಾಗುತ್ತಿರುವುದು ಸಹ ಈ ಅಪಘಾತಗಳಿಗೆ ಕಾರಣವಾಗುತ್ತಿದೆ, ಯಾವಾಗ ಎಲ್ಲಿ ರಸ್ತೆ ಬದಲಾವಣೆಯಾಗುತ್ತದೆ ಎಂಬುದೇ ಸಾರ್ವಜನಿಕರಿಗೆ ಗೊಂದಲವಾಗುತ್ತಿದ್ದು, ರಾತ್ರಿ ವೇಳೆಯಂತು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.







