
ಬೆಂಗಳೂರು: ಬೌರಿಂಗ್ ಆಸ್ಪತ್ರೆ ಬಳಿ ಗೋಡೆ ಕುಸಿದು 7 ಮಂದಿ ಬಲಿಯಾದ ಪ್ರಕರಣದಲ್ಲಿ ಸಂಬಂಧಪಟ್ಟ ಎಂಜಿನಿಯರ್ ಅನ್ನು ಕೂಡಲೇ ಅಮಾನತು ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ.
ಬೌರಿಂಗ್ ಆಸ್ಪತ್ರೆ ಬಳಿ ಗೋಡೆ ಕುಸಿದು 7 ಜನರು ಸಾವು ಹಾಗೂ ಮಳೆ ಅವಾಂತರ ಸಂಬಂಧ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸಿಎಂ ಸಭೆ ನಡೆಸಿದರು. ಈ ವೇಳೆ ಸಿಎಂ ಕೆಲವು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗೋಡೆಗೆ ಹಾನಿ ಆಗಲಿದೆ ಅಂತ ಗೊತ್ತಿದ್ದರೂ ಕೂಡ ಕಾಮಗಾರಿ ಮಣ್ಣನ್ನು ಅಲ್ಲಿ ಸುರಿದಿದ್ದು ಯಾಕೆ ಎಂದು ಪ್ರಶ್ನಿಸಿ, ಸಂಬಂಧಪಟ್ಟ ಕಾರ್ಯಪಾಲಕ ಎಂಜಿನಿಯರ್ ಅನ್ನು ಅಮಾನತು ಮಾಡುವಂತೆ ಸೂಚಿಸಿದ್ದಾರೆ.
ಇದೇ ವೇಳೆ ಮಣ್ಣು ಸುರಿದಿದ್ದರೂ ಕೂಡ ನೀವು ಯಾಕೆ ನೋಡಿಕೊಳ್ಳಲಿಲ್ಲ ಎಂದು ಬೌರಿಂಗ್ ಆಸ್ಪತ್ರೆ ಮುಖ್ಯಸ್ಥರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಬೌರಿಂಗ್ ಆಸ್ಪತ್ರೆ ಮುಖ್ಯಸ್ಥರಿಗೆ ನೋಟಿಸ್ ನೀಡಲು ಸಿಎಂ ಆದೇಶಿಸಿದ್ದಾರೆ.
ಬೆಂಗಳೂರಿನಲ್ಲಿ ಸುರಿದ ಮಳೆಯಲ್ಲಿ ಸಾಕಷ್ಟು ಹಾನಿಯಾಗಿದ್ದು, 250ಕ್ಕೂ ಹೆಚ್ಚು ಮರಗಳು ಬಿದ್ದಿವೆ. ಮುಂಗಾರು ಮಳೆ ಪ್ರಾರಂಭವಾಗುವ ಮೊದಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಬೆಂಗಳೂರಿನ ಐದೂ ವಲಯಗಳ ಆಯುಕ್ತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದರು.
ಗೋಡೆ ಕುಸಿತ: ಇಇ ಅಮಾನತಿಗೆ ಸಿಎಂ ಆದೇಶ







