
ಬೆಂಗಳೂರು: ಏಪ್ರಿಲ್‌ನ ಬಿಸಿಲಿಗೆ ಕರುನಾಡು ಕಾದ ಕಾವಲಿಯಂತಾಗಿದೆ. ಆದರೆ ಬಿಸಿಲಿನ ಪ್ರತಾಪ ಅಸಲಿಗೆ ಇನ್ನೂ ಶುರುವಾಗಿಲ್ಲ. ಮೇ ತಿಂಗಳಲ್ಲಿ ಮತ್ತಷ್ಟು ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಏಪ್ರಿಲ್ ತಿಂಗಳಲ್ಲೇ ನೆತ್ತಿ ಸುಡುವ ಸೂರ್ಯನ ಪ್ರತಾಪಕ್ಕೆ ಕರುನಾಡು ಹೈರಾಣಾಗಿದೆ. ಇದರ ಮಧ್ಯೆ ಮೇನಲ್ಲಿ ಸೂರ್ಯ ಇನ್ನೂ ಉಗ್ರ ಪ್ರತಾಪಿಯಾಗಲಿದ್ದಾನೆ. ಮೇನಲ್ಲಿ ಅಸಲಿ ಬಿಸಿಲಾಘಾತ ಶುರುವಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಇನ್ನು ದೇಶದಲ್ಲಿ ಹಿಂದೆಂದಿಗಿಂತಲೂ ಬಿಸಿಲ ತಾಪಮಾನ ಜಾಸ್ತಿ ಇದ್ದು, ಮೇ ಅಂತ್ಯದವರೆಗೂ ಮುಂದುವರಿಯುವ ಸಾಧ್ಯತೆ ಇದೆ. ಮುಂದಿನ ತಿಂಗಳು ಸ್ವಲ್ಪ ಮಳೆಯಾದರೆ, ತಾಪಮಾನ ಕಡಿಮೆ ಆಗಬಹುದು. ಇಲ್ಲದಿದ್ದರೆ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಎಚ್ಚರಿಕೆ ಕೊಟ್ಟಿದೆ.
ಮೇ ತಿಂಗಳಲ್ಲಿ 3-4 ಡಿಗ್ರಿ ಸೆಲ್ಸಿಯಸ್ ಬಿಸಿಲು ಹೆಚ್ಚಳವಾಗಲಿದೆ. ಮೇ ಮೊದಲ ವಾರದಲ್ಲಿಯೇ ಬೆಂಗಳೂರು ಸೇರಿದಂತೆ ಕರ್ನಾಟಕ ಇನ್ನೂ ಸುಡಲಿದೆ. ಬೇಸಿಗೆಯಲ್ಲಿ ಆಗೊಮ್ಮೆ- ಈಗೊಮ್ಮೆ ಬರುತ್ತಿದ್ದ ಮಳೆ ಈ ವರ್ಷ ಕಾಣೆಯಾಗಿದೆ.
ಜಗತ್ತಿನ ಅತ್ಯಂತ ಹೆಚ್ಚಿನ ತಾಪಮಾನವಿರುವ 100 ನಗರಗಳಲ್ಲಿ ದೇಶದ 95 ನಗರಗಳಿವೆ ಎಂದು ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರ ಮಾಹಿತಿ ನೀಡಿದೆ. ದೇಶದ ಬಹುಭಾಗದಲ್ಲಿನ ತಾಪಮಾನ ಸಾಮಾನ್ಯಕ್ಕಿಂತ 5 ಡಿಗ್ರಿ ಹೆಚ್ಚು ಹಾಗೂ ಅದಕ್ಕಿಂತ ಜಾಸ್ತಿ ಇದೆ ಎಂದು ಇಲಾಖೆ ಹೇಳಿದೆ.
ಬೆಂಗಳೂರು ಅಂತಾರಾಷ್ಟ್ರೀಯ ಏರ್‌ಪೋಟ್ ನಲ್ಲಿ 38.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಏಪ್ರಿಲ್ ನಲ್ಲಿ ಮೂರನೇ ಬಾರಿಗೆ ದಾಖಲೆಯಾಗಿರುವ ಬಿಸಿಲಾಗಿದೆ. 2014ರಲ್ಲಿ 38.3 ಡಿಗ್ರಿ ಸೆಲ್ಸಿಯಸ್ ಹಾಗೂ 2024ರಲ್ಲಿ 38.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಇನ್ನು, ಉತ್ತರ ಕರ್ನಾಟಕದಲ್ಲಿ ಸೂರ್ಯಶಿಕಾರಿ ಹೇಳತೀರದಾಗಿದೆ.
ಮೇನಲ್ಲಿ ‘ಸೂರ್ಯ ಶಿಕಾರಿ’ ಇನ್ನೂ 3-4 ಡಿಗ್ರಿ ಸೆಲ್ಸಿಯಸ್ ಬಿಸಿಲು ಹೆಚ್ಚಳ ಸಾಧ್ಯತೆ







