ನವದೆಹಲಿ: ದೇಶದಲ್ಲಿ ಎಲ್ಪಿಜಿ ಕೊರತೆ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ಸಂಸತ್ ಅಧಿವೇಶನದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಅಡುಗೆ ಅನಿಲದ ಬಿಕ್ಕಟ್ಟು ಮತ್ತು ಕಾಳಸಂತೆಯಲ್ಲಿ ಮಾರಾಟ ತಡೆಯಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಜೆ.ಪಿ ನಡ್ಡಾ ಅವರು, ವಿರೋಧ ಪಕ್ಷವು ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸರ್ಕಾರದೊಂದಿಗೆ ನಿಲ್ಲುವ ಬದಲು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ತಿರುಗೇಟು ನೀಡಿದರು.
ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕರಾದ ಖರ್ಗೆ ಅವರು, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಪಿಜಿ ಬಿಕ್ಕಟ್ಟಿನಿಂದ ಜನ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಬಡವರು ಮತ್ತು ದುರ್ಬಲರು, ಮಧ್ಯಮ ವರ್ಗ, ಸಾಮಾನ್ಯ ಮನೆಗಳು, ರೆಸ್ಟೋರೆಂಟ್ಗಳು, ಹಾಸ್ಟೆಲ್ಗಳು ಮತ್ತು ವಾಣಿಜ್ಯ ಬಳಕೆದಾರರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಉಲ್ಬಣಗೊಂಡಾಗ, ಸರ್ಕಾರ ಭಾರತೀಯ ನಾಗರಿಕರಿಗೆ ಸಲಹೆ ನೀಡಿತ್ತು ಮತ್ತು ಅಂದಿನಿಂದ, ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸರ್ಕಾರಕ್ಕೆ ತಿಳಿದಿತ್ತು. ಆದರೆ ಇದರ ಹೊರತಾಗಿಯೂ ಯಾವುದೇ ಸಿದ್ಧತೆಗಳನ್ನು ಕೇಂದ್ರ ಸರ್ಕಾರ ಮಾಡಿಕೊಂಡಿಲ್ಲ. ಪರಿಣಾಮವಾಗಿ ದೇಶದ ಅನೇಕ ವಲಯಗಳು ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಬಿಕ್ಕಟ್ಟು ಸರ್ಕಾರದ ಕರುಣಾಜನಕ ನಿರ್ವಹಣೆ ಮತ್ತು ದೋಷಪೂರಿತ ವಿದೇಶಾಂಗ ನೀತಿಯನ್ನು ಬಹಿರಂಗಪಡಿಸಿದೆ ಎಂದು ಅವರು ಟೀಕಿಸಿದರು.
ಸಂಸತ್ ನಲ್ಲೂ ಗ್ಯಾಸ್ ಸಮಸ್ಯೆ ಪ್ರತಿಧ್ವನಿ ಎಲ್ಪಿಜಿ ಕೊರತೆಗೆ ಮಲ್ಲಿಕಾರ್ಜುನ ಖರ್ಗೆ ಕಳವಳ: ಬಿಜೆಪಿ ತಿರುಗೇಟು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


