
ರಾಮನಗರ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮೇ 15ಕ್ಕೆ ಮುಖ್ಯಮಂತ್ರಿ ಆಗೋದು ಫಿಕ್ಸ್ ಆಗಿದೆ. ಹಿಂದೆ ನಾನು ಎರಡ್ಮೂರು ಬಾರಿ ದಿನಾಂಕಗಳನ್ನು ಹೇಳಿದ್ದೇನೆ. ವಿವಿಧ ಕಾರಣಕ್ಕೆ ಆಗ ಆಗಲಿಲ್ಲ. ಈಗಿನದು ಅಂತಿಮ ದಿನಾಂಕ. ಡಿಕೆಶಿ ಸಿಎಂ ಆಗೇ ಆಗುತ್ತಾರೆ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಭರವಸೆಯ ಮಾತನಾಡಿದ್ದಾರೆ.
ರಾಮನಗರ ತಾಲ್ಲೂಕಿನ ಕೇತೋಹಳ್ಳಿಯಲ್ಲಿ ಮಂಗಳವಾರ ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದ ಬೆಳವಣಿಗೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಮೇ 15ರಂದು ನಮ್ಮ ನಾಯಕನ ಜನ್ಮದಿನವಿದೆ. ಅಂದು ಮುಖ್ಯಮಂತ್ರಿ ಹುದ್ದೆಯ ಉಡುಗೊರೆ ಸಿಗಲಿದೆ. ಈ ಅವಧಿಯಲ್ಲೇ ಅವರು ಸಿ.ಎಂ ಆಗಬೇಕು ಮತ್ತು ಅವರ ನಾಯಕತ್ವದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳಾಗಬೇಕು ಎಂಬುದು ಎಲ್ಲರ ಬಯಕೆಯಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರನ್ನೇ ಮುಂದುವರಿಸುವಂತೆ ಹೈಕಮಾಂಡ್‌ಗೆ ಮನವಿ ಮಾಡುತ್ತೇವೆ ಎಂಬ ಶಾಸಕ ಕೆ.ಎನ್.ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಹುಸೇನ್, ರಾಜಕಾರಣದಲ್ಲಿ ನಾವು ಬದಲಾವಣೆ ಬಯಸಿ ನಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ. ಅದರಂತೆ, ರಾಜಣ್ಣ ಅವರೂ ತಮ್ಮ ಅಭಿಪ್ರಾಯ ಹೇಳಿದ್ದಾರೆ. ರಾಜಕಾರಣದಲ್ಲಿ ಅಭಿಪ್ರಾಯ ಬೇಧ ಸಹಜ. ಜಾತಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಗುಂಪುಗಾರಿಕೆ ಇದೆ. ರಾಜಕೀಯವೂ ಅದರಿಂದ ಹೊರತಾಗಿಲ್ಲ ಎಂದರು.
ಪಕ್ಷದ ಹಿರಿಯ ನಾಯಕರೂ ಆಗಿರುವ ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಡಾ.ಎಚ್.ಸಿ. ಮಹದೇವಪ್ಪ ಅವರು ಪಕ್ಷದ ವರಿಷ್ಠರನ್ನು ಭೇಟಿ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ತಮ್ಮ ಕಷ್ಟಸುಖದ ಜೊತೆಗೆ ರಾಜ್ಯದ ಕೆಲವು ವಿಷಯಗಳ ಕುರಿತು ರ‍್ಚಿಸಲು ಇಬ್ಬರೂ ದೆಹಲಿಗೆ ಹೋಗಿದ್ದಾರೆ ಎಂದು ಹೇಳಿದರು.
ನನ್ನ ಕ್ಷೇತ್ರದಲ್ಲಿ ನಾನೇ ಮುಖ್ಯಮಂತ್ರಿ, ನಾನೇ ಸಚಿವ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದೇನೆ. ನನಗೆ ಜನರ ಪ್ರೀತಿ ಮತ್ತು ವಿಶ್ವಾಸ ಬಿಟ್ಟರೆ, ಬೇರಾವ ಸ್ಥಾನವೂ ಬೇಡ ಎಂದು ತಾವು ಸಚಿವ ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.
ಮೇ 15ಕ್ಕೆ ಡಿಕೆಶಿ ಸಿಎಂ ಆಗೋದು ಫಿಕ್ಸ್: ಇಕ್ಬಾಲ್







