ಚಾಮರಾಜನಗರ: ನಿಯಂತ್ರಣ ತಪ್ಪಿದ ಕೆಎಸ್ಆರ್ಟಿಸಿ ಬಸ್ ಪಲ್ಟಿಯಾಗಿದ್ದು, 30ಕ್ಕೂ ಅಧಿಕ ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ರಸ್ತೆಯ ತಾಳುಬೆಟ್ಟದ ತಿರುವಿನಲ್ಲಿ ಇಂದು ನಡೆಯಿತು. ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲದತ್ತ ತೆರಳುತ್ತಿದ್ದ ಕೆಎ-09 ಎಫ್-5415 ಬಸ್ ತಾಳುಬೆಟ್ಟದ ತಿರುವಿನಲ್ಲಿ ತಡೆಗೋಡೆಯ ಬಳಿ ಪಲ್ಟಿಯಾಗಿದೆ. ಬಸ್ನಲ್ಲಿದ್ದ 50 ಮಂದಿ ಪ್ರಯಾಣಿಕರಲ್ಲಿ 30ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದ್ದು, ಬಹುತೇಕರಿಗೆ ಗಂಭೀರ ಸ್ವರೂಪದ ಪೆಟ್ಟುಗಳಾಗಿವೆ ಎಂದು ತಿಳಿದು ಬಂದಿದೆ. ಬಸ್ ನಿರ್ವಾಹಕಿ ಪದ್ಮಾವತಿ ಅವರಿಗೆ ತಲೆಗೆ ತೀವ್ರ ಗಾಯವಾಗಿದೆ. ಪ್ರಯಾಣಿಕರಾದ ಮೈಸೂರಿನ ದಾಕ್ಷಾಯಿಣಿ, ಸಿದ್ದಯ್ಯನಪುರದ ಸುಂದ್ರಮ್ಮ ಬಸವರಾಜು ಎಂಬವರಿಗೂ ತೀವ್ರ ಪೆಟ್ಟಾಗಿದೆ. ಗಾಯಗೊಂಡ ಎಲ್ಲ ಪ್ರಯಾಣಿಕರಿಗೂ ಕೌದಳ್ಳಿ, ಹನೂರು ಮತ್ತು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹುಣ್ಣಿಮೆ ಹಿನ್ನೆಲೆಯಲ್ಲಿ ವಾಹನ ದಟ್ಟಣೆಯೂ ಅಧಿಕವಾಗಿದ್ದ ಕಾರಣ ಹತ್ತಾರು ವಾಹನಗಳು ಸಾಲುಗಟ್ಟಿ ನಿಂತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕೊಳ್ಳೇಗಾಲ ಆಸ್ಪತ್ರೆಯಲ್ಲಿ 25 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಗಾಯಾಳುಗಳು ಬಸ್ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಿರುವಿನಲ್ಲಿ ಉರುಳುತ್ತಿದ್ದಂತೆ ಚಾಲಕ ಬಸ್ಸಿನಿಂದ ಜಿಗಿದು ಪರಾರಿಯಾಗಿದ್ದಾನೆ. ಆರಂಭದಿಂದಲೂ ತುಂಬಾ ವೇಗವಾಗಿ ಬಸ್ ಚಾಲನೆ ಮಾಡುತ್ತಿದ್ದ. ಈ ಬಗ್ಗೆ ಎಚ್ಚರಿಸಿದರೂ ಕಿವಿಗೊಡಲಿಲ್ಲ. ಅತಿವೇಗ ಮತ್ತು ಅಜಾಗರೂಕತೆಯಿಂದ ಅವಘಡ ಉಂಟಾಗಿದೆ ಎಂದು ಗಾಯಾಳುಗಳು ತಿಳಿಸಿದರು.
Editor TumkurVarthe
ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು





