
ಬೆಂಗಳೂರು: ತಮಿಳುನಾಡಿನ ಮತದಾರರು ಬದಲಾವಣೆ ಬಯಸಿದ್ದರು. ಅದರಂತೆ ಬದಲಾವಣೆಗೆ ಮತ ಹಾಕಿದ್ದಾರೆ. ಫಲಿತಾಂಶ ಆಶ್ಚರ್ಯಕರವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ತಮಿಳುನಾಡಿನಲ್ಲಿ ಫಲಿತಾಂಶ ಆಶ್ಚರ್ಯಕರವಾಗಿದೆ. ಯುವಕರು ವಿಜಯ್ಗೆ ಮತ ಹಾಕಿದ್ದಾರೆ. ಚುನಾವಣೆಗಳಲ್ಲಿ ಹೀಗೂ ಆಗುತ್ತದೆ ಎಂದರು.
ಪಶ್ಚಿಮ ಬಂಗಾಳದಲ್ಲಿ 15 ವರ್ಷ ಮಮತಾ ಬ್ಯಾನರ್ಜಿ ಇದ್ದರು. ಆಡಳಿತ ವಿರೋಧಿ ಅಲೆ ಇರಬಹುದು. ನಾನು ಅಲ್ಲಿಗೆ ಹೋಗಿಲ್ಲ. ಎಸ್ಐಆರ್ ಮಾಡಿ 91 ಲಕ್ಷ ಮತ ರದ್ದು ಮಾಡಿದ್ದರು. ಇವೆಲ್ಲ ಕಾರಣ ಇರಬಹುದು. ಕೇರಳ ಫಲಿತಾಂಶ ನಿರೀಕ್ಷೆ ಇತ್ತು. ನಿರೀಕ್ಷೆಗಿಂತ ಜಾಸ್ತಿ ಬಂದಿದೆ. ಕೇರಳ ಸಿಎಂ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಎಸ್ಐಆರ್ ಮಾಡಲು ಅವಕಾಶ ಕೊಡ್ತೀರಾ ಎಂಬ ಪ್ರಶ್ನೆಗೆ ಕರ್ನಾಟಕದಲ್ಲಿ ನಿಷ್ಪಕ್ಷಪಾತವಾಗಿ ಎಸ್ಐಆರ್ ಮಾಡಬೇಕು. ಟಾರ್ಗೆಟ್ ಮಾಡಿದರೆ ಅದಕ್ಕೆ ಅವಕಾಶ ಕೊಡಲ್ಲ ಎಂದರು.
ಉಪಚುನಾವಣೆ ಎರಡು ಕ್ಷೇತ್ರದಲ್ಲಿ ನಾವು ಗೆದ್ದಿದ್ದೇವೆ. ಬಿಜೆಪಿ ಅವರು ಉಪಚುನಾವಣೆ ಮುಂದಿನ ಚುನಾವಣೆ ದಿಕ್ಸೂಚಿ ಅಂತ ಪ್ರಚಾರ ಮಾಡಿದರು. ಈಗ ನಾವು ಗೆದ್ದಿದ್ದೇವೆ. ಬಿಜೆಪಿ ಪ್ರಕಾರ 2028ಕ್ಕೂ ನಾವೇ ಬರ್ತೀವಿ ಅಂತ ಆಯ್ತಲ್ಲ. ಕಳೆದ ಬಾರಿ 3 ಬೈ ಎಲೆಕ್ಷನ್ನಲ್ಲಿ ಗೆದ್ದಿದ್ದೇವೆ. ಈಗ ಮತ್ತೆ 2ರಲ್ಲಿ ಗೆದ್ದಿದ್ದೇವೆ. ನಮ್ಮ ಕಾರ್ಯಕ್ರಮ ಜನ ಮೆಚ್ಚಿದ್ದಾರೆ. ನಮ್ಮ ಕಾರ್ಯಕ್ರಮಗಳು ಜನರಿಗೆ ತಲುಪಿವೆ. ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ ಎಂದು ಹೇಳಿದರು.
ದಾವಣಗೆರೆಯಲ್ಲಿ ಮುಸ್ಲಿಂಮರ 56 ಸಾವಿರದಲ್ಲಿ 35 ಸಾವಿರ ಮತ ನಮಗೆ ಬಂದಿದೆ. ಈ ಬಾರಿ ಸ್ವಲ್ಪ ಎಸ್ಡಿಪಿಐಗೆ ವೋಟ್ ಹಾಕಿದ್ದಾರೆ. ಎಲ್ಲಿ ಕಡಿಮೆ ಆಗಿದೆ ಅಂತ ಪಕ್ಷ ತನಿಖೆ ಮಾಡುತ್ತದೆ. ಈಗ ಚುನಾವಣೆ ವಿರೋಧಿ ಚಟುವಟಿಕೆ ಹಿನ್ನೆಲೆ ಕೆಪಿಸಿಸಿ ತಗೊಂಡಿರುವ ಕ್ರಮ ಸರಿ ಇದೆ ಎಂದು ತಿಳಿಸಿದರು.
ತಮಿಳುನಾಡಿನಲ್ಲಿ ಅಚ್ಚರಿ, ಕೇರಳದಲ್ಲಿ ನಿರೀಕ್ಷಿತ: ಸಿಎಂ







