
ತುಮಕೂರು: ತುರುವೇಕೆರೆ ತಾಲ್ಲೂಕಿನ ಮಲ್ಲಘಟ್ಟ ಸುತ್ತಮುತ್ತ ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಶನಿವಾರ ತುಮಕೂರು ಜಿಲ್ಲೆಗೆ ಭೇಟಿ ನೀಡಿದ್ದ ಅವರು, ಮಲ್ಲಘಟ್ಟದ ಗಂಗಾಧರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸುತ್ತಮುತ್ತಲಿನ ಜನರಿಗೆ ಅನುಕೂಲವಾಗುವಂತೆ ಕಾಲುವೆ ವ್ಯವಸ್ಥೆ, ಸಮುದಾಯ ಭವನ, ಅತಿಥಿ ಗೃಹ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿ ಮಾಡಲಾಗುವುದು ಎಂದು ಹೇಳಿದರು.
ಗಂಗಾಧರೇಶ್ವರ ದೇವಾಲಯ ಹಾಗೂ ಮಲ್ಲಘಟ್ಟ ಕೆರೆ ತಮಗೆ ವಿಶೇಷ ಭಾವನಾತ್ಮಕ ನಂಟು ಹೊಂದಿರುವ ಸ್ಥಳಗಳು. ಈ ಕೆರೆಗೆ ಈ ಹಿಂದೆ ಮೂರು- ನಾಲ್ಕು ಬಾರಿ ಭೇಟಿ ನೀಡಿದ್ದೇನೆ. ಇದು ಐತಿಹಾಸಿಕ ಹಾಗೂ ಪವಿತ್ರ ಕ್ಷೇತ್ರ. ಇಲ್ಲಿನ ನೀರನ್ನು ನಮ್ಮ ಮನೆ ಗೃಹಪ್ರವೇಶದ ಸಂದರ್ಭದಲ್ಲೂ ತೆಗೆದುಕೊಂಡು ಹೋಗಿದ್ದೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಮಲ್ಲಘಟ್ಟ ಕೆರೆ ಸದಾ ತುಂಬಿ ತುಳುಕುತ್ತಿರುತ್ತದೆ. ಸುಮಾರು 25 ವರ್ಷಗಳಿಂದ ಈ ಪ್ರದೇಶ ನನಗೆ ಗೊತ್ತಿದೆ. ಇಲ್ಲಿಗೆ ಬಂದಾಗ ತಮಗೆ ಸಂತೋಷ ಹಾಗೂ ನೆಮ್ಮದಿ ಸಿಗುತ್ತದೆ ಎಂದರು.
ಇಲ್ಲಿನ ಅಭಿವೃದ್ಧಿ ಬಗ್ಗೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಕಾಡುಸಿದ್ದೇಶ್ವರ ಮಠದವರೊಂದಿಗೆ ಚರ್ಚೆ ನಡೆಸಿದ್ದೇನೆ. ಅಭಿವೃದ್ಧಿಗೆ ಏನು ಬೇಕು ಎಂದು ಸ್ಥಳೀಯರು ಹಾಗೂ ಮಠದವರ ಸಲಹೆ ಪಡೆದು ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಪ್ರಮಾಣ ವಚನ ಸ್ವೀಕಾರದ ವೇಳೆ ಹಿಂದೂ ಸಂಪ್ರದಾಯ ಅನುಸರಿಸಿದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾರಣಕ್ಕಿಂತ ಭಕ್ತಿ ಮುಖ್ಯ. ಭಕ್ತನಿಗೂ ಭಗವಂತನಿಗೂ ಇರುವ ಸಂಬAಧ ವೈಯಕ್ತಿಕ. ಪ್ರಮಾಣವಚನ ಕಾರ್ಯಕ್ರಮಕ್ಕೆ ಹಿಂದೂ, ಕ್ರೈಸ್ತ, ಸಿಖ್, ಬೌದ್ಧ ಸೇರಿದಂತೆ ಎಲ್ಲಾ ಧರ್ಮಗಳ ಧಾರ್ಮಿಕ ಮುಖಂಡರನ್ನು ಆಹ್ವಾನಿಸಲಾಗಿತ್ತು ಎಂದರು.
ರಾಜ್ಯದ ಹಿತ ಕಾಪಾಡುವ ಜವಾಬ್ದಾರಿ ತಮ್ಮ ಮೇಲಿದೆ. ಎಲ್ಲ ಧರ್ಮಗಳ ಆಶೀರ್ವಾದ ಪಡೆಯುವ ಉದ್ದೇಶದಿಂದ ಆ ರೀತಿ ಕಾರ್ಯಕ್ರಮ ನಡೆಸಲಾಗಿತ್ತು ಎಂದು ಸ್ಪಷ್ಟಪಡಿಸಿದರು. ಶಾಸಕರಾದ ಕೆ.ಷಡಕ್ಷರಿ, ಎಂ.ಟಿ ಕೃಷ್ಣಪ್ಪ ಇತರರು ಇದ್ದರು.







